ಡೈಲಿ ವಾರ್ತೆ: 09/DEC/2023
ಕನ್ನಡದ ಹಿರಿಯ ನಟಿ ಲೀಲಾವತಿಯ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ
ಬೆಂಗಳೂರು: ಅಗಲಿದ ಹಿರಿಯ ಚೇತನ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ ಮೊಮ್ಮಗ ಯುವರಾಜ್ ಆಗಮಿಸಿದ್ದಾರೆ.
ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಇಂದು ಅಂತಿಮ ದರ್ಶನ ಪಡೆದಿದ್ದಾರೆ.
ವಿನೋದ್ ರಾಜ್ ಮದುವೆ ವಿಚಾರವಾಗಿ ಹಲವಾರು ಗೊಂದಲಗಳು ಇದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.
ಗಣ್ಯರ ದರ್ಶನ ನಂತರ ಅಂತ್ಯಕ್ರಿಯೆ:
ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ಸಂಸ್ಕಾರವನ್ನು ಅವರ ನೆಚ್ಚಿನ ತೋಟದಲ್ಲಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ನೆಲಮಂಗಲದ ಸೋಲದೇವನಹಳ್ಳಿ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ಜೆಸಿಬಿ ಮೂಲಕ ಫಾರ್ಮ್ಹೌಸ್ನಲ್ಲಿ ಸಮಾಧಿ ತೆಗೆಯುವ ಕಾರ್ಯ ಆರಂಭಗೊಂಡಿದ್ದು, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ತರಯಾರಿ ಶುರುವಾಗಿದೆ. ಮತ್ತೊಂದೆಡೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳು ಬರುವ ಗಣ್ಯರಿಗೆ ಅಂತಿಮ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.