ಡೈಲಿ ವಾರ್ತೆ: 09/DEC/2023

ಬ್ರಹ್ಮಾವರ: ಮಹಿಳೆಯೋರ್ವರಿಗೆ ಮನೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ – ದೂರು ದಾಖಲು

ಬ್ರಹ್ಮಾವರ: ಮಹಿಳೆಯೋರ್ವರಿಗೆ ಮನೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡು ನಂತರ, ಮನೆಯನ್ನೂ ಕೊಡಿಸದೆ, ಹಣವನ್ನೂ ಹಿಂದಿರುಗಿಸದೆ ವಿಶ್ವಾಸ ದ್ರೋಹ ಎಸಗಿದ ವ್ಯಕ್ತಿಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸಹೋಗಿ ನೊಂದ ಮಹಿಳೆ ನೀಡಿದ ದೂರಿನನ್ವಯ ಪ್ರಕರಣದ ವಿವರ ಇಂತಿದೆ :
ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ನಿವಾಸಿ ಮಹಿಳೆ ಮನೆ ಖರೀದಿಸುವ ಉದ್ದೇಶದಿಂದ, ತನ್ನ ಗಂಡನ ಸಂಬಂಧಿ ಕೃಷ್ಣ ಬಿ. ಎಂಬಾತನೊಂದಿಗೆ ಮನೆ ತೋರಿಸುವಂತೆ ಮನವಿ ಮಾಡಿದ್ದರು. ತಾನು ಲ್ಯಾಂಡ್ ಲಿಂಕ್ಸ್ ವೃತ್ತಿ ಮಾಡುವುದಾಗಿ ನಂಬಿಸಿದ್ದ, ಮೂಲತಃ ಬೈಂದೂರು ತಾಲೂಕು ಬಿಜೂರಿನ, ಪ್ರಸ್ತುತ ಕುಕ್ಕುಡೆ ನಿವಾಸಿಯಾದ ಕೃಷ್ಣ, ಬ್ರಹ್ಮಾವರ ಪರಿಸರದಲ್ಲಿನ ಮನೆಯೊಂದನ್ನು 16 ಲಕ್ಷ ರೂ.ಗಳಿಗೆ ಖರೀದಿ ಬಗ್ಗೆ ಮಾತನಾಡುವುದಾಗಿ ತಿಳಿಸಿ, ಮಹಿಳೆಯಿಂದ ಮುಂಗಡ ಹಣ ಕೇಳಿದ. ಈತನನ್ನು ನಂಬಿದ ಮಹಿಳೆ 2021ರ ಫೆಬ್ರವರಿಯಲ್ಲಿ ತನ್ನ ಪ್ರಾವಿಡೆಂಟ್ ಪಂಡ್ ನ 4 ಲಕ್ಷ ರೂ. ಗಳನ್ನು ನೀಡಿದ್ದರು. ನಂತರ ತಮ್ಮ ಸಹೋದರ ಸುರೇಶನ ಮೂಲಕ ಕೃಷ್ಣನ ಬ್ಯಾಂಕ್ ಖಾತೆಗೆ ಒಟ್ಟು 16 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು.

ಇಷ್ಟಾದ ಮೇಲೆ ವರಸೆ ಬದಲಿಸಿದ ಆರೋಪಿ ಕೃಷ್ಣ, ಆ ಮನೆಯ ಮೌಲ್ಯ ಒಂದೂವರೆ ಕೋಟಿ ರೂ. ಇದ್ದು, ಮನೆಗೆ 27 ಲಕ್ಷ ರೂ. ಟ್ಯಾಕ್ಸ್ ಕಟ್ಟಬೇಕಾಗಿದೆ ಎಂದ. ಇದರಿಂದ ಕೃಷ್ಣ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಸಂಶಯಗೊಂಡ ಮಹಿಳೆ, ತನಗೆ ಮನೆ ಬೇಡ ಎಂದು ತಿಳಿಸಿ, ಹಣ ಹಿಂದಿರುಗಿಸುವಂತೆ ಕೇಳುತ್ತಾರೆ.

ತನ್ನ ಮೋಸದ ಬಗ್ಗೆ ಆಕೆ ಅನುಮಾನಗೊಂಡಿದ್ದಾರೆ ಎಂದರಿತ ಕೃಷ್ಣ, ಮಹಿಳೆಯನ್ನು ಅವರ ಮನೆಯ ಒಳಗೆ ಕೂಡಿಹಾಕಿ, ಹಲ್ಲೆ ಮಾಡಿ, ಆಕೆಯ ಇಬ್ಬರು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆಯೋಡ್ಡಿದ.

ಭಯಭೀತರಾದ ಮಹಿಳೆ ಆಕೆಯ ತಾಯಿ ಹಾಗೂ ಬಂಧುಗಳ ಚಿನ್ನಾಭರಣಗಳನ್ನು ಅಡವಿರಿಸಿ 34 ಲಕ್ಷದ 50 ಸಾವಿರ ಮತ್ತು ಜಾಗವನ್ನು ಅಡಮಾನ ಮಾಡಿ 12 ಲಕ್ಷ ರೂ. ಗಳನ್ನು ಕೃಷ್ಣನಿಗೆ ನೀಡುತ್ತಾರೆ.
ಈ ನಡುವೆ ಮಹಿಳೆಯ ಸಾಂಸಾರಿಕ ತೊಂದರೆಗಳಿಂದ ಆಕೆಯ ಗಂಡ ಆಕೆಯನ್ನು ತೊರೆದಿದ್ದು, ಆ ಬಗ್ಗೆ ಕೋರ್ಟಿನಲ್ಲಿ ಪ್ರಕರಣವಿತ್ತು. ಈ ಗಂಡನ ವಿರುದ್ಧದ ಪ್ರಕರಣ ನಡೆಸಲು ವಕೀಲರ ಹಾಗೂ ಕೋರ್ಟ್ ಫೀಸು ಎಂದು ನಂಬಿಸಿ ಕೃಷ್ಣ ಆಕೆಯಿಂದ ಮತ್ತೆ 15 ಲಕ್ಷದ 20 ಸಾವಿರ ರೂ. ಪಡೆದುಕೊಂಡಿದ್ದ. ಆತನನ್ನು ನಂಬಿದ್ದ ಮಹಿಳೆ ತನ್ನ ಸಂಬಳದ ಖಾತೆ, ತನ್ನ ಪರಿಚಿತರು, ಸ್ನೇಹಿತರಿಂದ ಸಾಲ ಪಡೆದು, ತನ್ನ ಮತ್ತು ಮಕ್ಕಳ ಹೆಸರಲ್ಲಿ ಅಂಚೆ ಕಚೇರಿ ಖಾತೆಯಲ್ಲಿರಿಸಿದ್ದ ಹಣ ಹಾಗೂ ತನ್ನ ಮೂರು ವರ್ಷಗಳ ತಿಂಗಳ ಸಂಬಳ ಎಲ್ಲ ಒಟ್ಟು ಸೇರಿಸಿ 15 ಲಕ್ಷದ 20 ಸಾವಿರ ರೂ. ಗಳನ್ನು ಆರೋಪಿ ಕೃಷ್ಣನಿಗೆ ನೀಡಿದ್ದರು.

ಇದರಿಂದಲೂ ತೃಪ್ತನಾಗದ ಕೃಷ್ಣ ತನ್ನ ಪತ್ನಿಗೆ ಹುಷಾರಿಲ್ಲ ಎಂದು ಸುಳ್ಳು ಹೇಳಿ ಮತ್ತೆ ಹಣ ಕೇಳಿದ್ದರಿಂದ ಮಹಿಳೆಯೂ , ಫೈನಾನ್ಸ್ ಮತ್ತು ಸ್ನೇಹಿತೆಯಿಂದ ಸಾಲ ಪಡೆದು ಒಟ್ಟು 4 ಲಕ್ಷದ 50 ಸಾವಿರ ರೂ. ಗಳನ್ನು ನೀಡಿದ್ದರು. ಸ್ನೇಹಿತೆಯ ಆಭರಣಗಳನ್ನು ತನ್ನ ಹೆಸರಿನಲ್ಲಿ ಅಡವಿಟ್ಟು 7 ಲಕ್ಷದ 50 ಸಾವಿರ ರೂ. ಗಳನ್ನೂ ನೀಡಿದ್ದರು. ಒಟ್ಟಾರೆಯಾಗಿ ಆರೋಪಿ ಕೃಷ್ಣ ಮಹಿಳೆಯಿಂದ 93 ಲಕ್ಷದ 70 ಸಾವಿರ ರೂ. ಗಳನ್ನು ಪಡೆದುಕೊಂಡಿದ್ದ. ಆ ನಂತರವೂ ಮನೆಯನ್ನು ಕೊಡಿಸಲಿಲ್ಲ, ಹಣವನ್ನೂ ಹಿಂತಿರುಗಿಸಲಿಲ್ಲ. ಇಷ್ಟೆಲ್ಲಾ ಆದಮೇಲೆ ಮಹಿಳೆಗೆ ತಾನು ಮೋಸ ಹೋಗಿರುವುದು ಸ್ಪಷ್ಟವಾಗಿ ಅರಿವಿಗೆ ಬಂದು ಬ್ರಹ್ಮಾವರ ಪೊಲೀಸರಿಗೆ ಕೃಷ್ಣನ ವಿರುದ್ಧ ದೂರು ನೀಡಿದರು. ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಠಾಣಾಧಿಕಾರಿ ಮಧು ಬಿ. ಇ. ಈ “ಕೃಷ್ಣ ಲೀಲೆ” ಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.