ಡೈಲಿ ವಾರ್ತೆ: 21/DEC/2023

ಬಿಎಂಡಬ್ಲ್ಯು ಬೈಕ್ನ ವೇಗ ತೋರಿಸಲು ಹೋಗಿ ಅಪಘಾತ – ಸವಾರ ಸಾವು!

ಬೆಂಗಳೂರು: ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಅತ್ಯಾಧುನಿಕ ಬಿಎಂಡಬ್ಲ್ಯು ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.

ಬುಧವಾರ ರಾತ್ರಿ ಇಬ್ಬರು ಬೈಕ್ ಡೀಲರ್‌ಗಳು ಬಿಎಂಡಬ್ಲ್ಯು 1000 ಸಿಸಿ ಬೈಕ್‌ನ ವೇಗದ ಬಗ್ಗೆ ಮಾಹಿತಿ ನೀಡಲು ಅದನ್ನು ವೇಗವಾಗಿ ಓಡಿಸಿ ತೋರಿಸಿದಾಗ ಘಟನೆ ಸಂಭವಿಸಿದೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಶೇಖ್ ನಾಸಿರ್ (32) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸೈಯದ್ ಮುದಾಸಿರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಸಿರ್ ಮತ್ತು ಮುದಾಸಿರ್ ಇಬ್ಬರೂ ಬೈಕ್ ಡೀಲರ್ ಆಗಿದ್ದರು. ಮುದಾಸಿರ್ ತನ್ನ ಗ್ರಾಹಕರೊಬ್ಬರಿಗೆ ಅತ್ಯಾಧುನಿಕ ಬೈಕ್‌ಗಾಗಿ ಹುಡುಕುತ್ತಿದ್ದರು. ಮುದಾಸಿರ್‌ಗೆ ತೋರಿಸಲು ನಾಸಿರ್‌ ಬಿಎಂಡಬ್ಲ್ಯು ಬೈಕ್‌ ಪಡೆದಿದ್ದರು. ಇವರಿಬ್ಬರು ಬೈಕ್ನಲ್ಲಿ ತೆರಳುತ್ತಿದ್ದಾಗ ಅಶೋಕ ಪಿಲ್ಲರ್ ಬಳಿ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುದಾಸಿರ್ ದೂರ ಎಸೆಯಲ್ಪಟ್ಟರು. ಗಾಯಾಳುಗಳಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ನಾಸಿರ್ ಮೃತಪಟ್ಟಿದ್ದಾರೆ. ಮುದಾಸಿರ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಮಾಧವ್ ಪಾರ್ಕ್‌ನಿಂದ ಅಶೋಕ ಪಿಲ್ಲರ್‌ಗೆ ತೆರಳುತ್ತಿದ್ದು, ಕಾರು ಕನಪಾಳ್ಯದಿಂದ ಬರುತ್ತಿತ್ತು. ಕಾರು ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಸಂಚರಿಸಿದ್ದು, ಸಮಯಕ್ಕೆ ಸರಿಯಾಗಿ ಬೈಕ್ ನಿಯಂತ್ರಿಸಲು ಸಾಧ್ಯವಾಗದಿರುವುದು ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.