


ಡೈಲಿವಾರ್ತೆ: 18/ನ./2026




ಉಡುಪಿ: ಸಿಬಿಐ, ದೆಹಲಿ ಪೊಲೀಸರ ಹೆಸರಿನಲ್ಲಿ ಬೆದರಿಕೆ – 15.98 ಲಕ್ಷ ರೂ. ಸೈಬರ್ ವಂಚನೆ

ಉಡುಪಿ: ಸಿಬಿಐ ಮತ್ತು ದೆಹಲಿ ಪೊಲೀಸರ ಅಧಿಕಾರಿಗಳೆಂದು ನಂಬಿಸಿ, ಬಂಧನದ ಭೀತಿ ಹುಟ್ಟಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15,98,976 ರೂ. ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಉಡುಪಿಯ ಶೇಷಾಚಲ (51) ಎಂಬವರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, 2026ರ ಅಕ್ಟೋಬರ್ 18ರಂದು ಬೆಳಿಗ್ಗೆ 11.25ರ ಸುಮಾರಿಗೆ ಶೇಷಾಚಲ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. ದೆಹಲಿಯಲ್ಲಿ ನಿಮ್ಮ ಹೆಸರಿನ ಐಸಿಐಸಿಐ ಬ್ಯಾಂಕ್ ಪಾಸ್ಬುಕ್ ಪತ್ತೆಯಾಗಿದ್ದು, ಅದು ಪಂಕಜ್ ಶರ್ಮಾ ಎಂಬಾತನಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ, ಮಾದಕ ವಸ್ತುಗಳ ಸಾಗಾಟ ಹಾಗೂ ಮಕ್ಕಳ ಅಪಹರಣ ಪ್ರಕರಣದಲ್ಲಿ ಬಳಕೆಯಾಗಿದೆ ಎಂದು ತಿಳಿಸಿದ್ದಾನೆ. ಅಲ್ಲದೆ, ಈ ಪ್ರಕರಣದಲ್ಲಿ ದೆಹಲಿ ಸಿಬಿಐ ಪೊಲೀಸರು ನಿಮ್ಮನ್ನು ಬಂಧಿಸಲು ನ್ಯಾಯಾಲಯದಿಂದ ಆದೇಶ ಪಡೆದಿದ್ದಾರೆ. ತಕ್ಷಣ ದೆಹಲಿಗೆ ಬರಬೇಕು, ಇಲ್ಲವಾದಲ್ಲಿ ವಿಡಿಯೋ ಕರೆ ಮೂಲಕ ತನಿಖೆಗೆ ಸಹಕರಿಸಬೇಕು ಎಂದು ಬೆದರಿಕೆ ಹಾಕಿದ್ದಾನೆ.
ಆರೋಪಿತರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಶೇಷಾಚಲ ಅವರು ತಮ್ಮ ಪತ್ನಿಯ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಬಳಿಕ ಆಕೆಯ ಮೊಬೈಲ್ಗೆ ವಿಡಿಯೋ ಕರೆ ಮಾಡಿರುವ ವ್ಯಕ್ತಿ ಪೊಲೀಸ್ ಸಮವಸ್ತ್ರ ಧರಿಸಿಕೊಂಡು, ತಾನು ದೆಹಲಿ ಪೊಲೀಸ್ ಇಲಾಖೆಯ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಮತ್ತೊಂದು ಮೊಬೈಲ್ ಪರದೆಯಲ್ಲಿ ಶೇಷಾಚಲ ಅವರ ಹೆಸರಿನಲ್ಲಿರುವ ಪ್ರಕರಣದ ಸಂಖ್ಯೆಯನ್ನು ತೋರಿಸಿ ನಂಬಿಕೆ ಮೂಡಿಸಿದ್ದಾನೆ.
ಬಳಿಕ ಮತ್ತೊಬ್ಬ ವ್ಯಕ್ತಿಗೆ ಕರೆ ಹಸ್ತಾಂತರಿಸಿ, ನೀವು ಎಲ್ಲಿದ್ದರೂ ಪ್ರತಿ ಗಂಟೆಗೊಮ್ಮೆ ಮಾಹಿತಿ ನೀಡಬೇಕು. ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಯಾರಿಗಾದರೂ ತಿಳಿಸಿದರೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದಾದ ಬಳಿಕ ಪ್ರತಿದಿನ ಪತ್ನಿಯ ಮೊಬೈಲ್ಗೆ ವಿಡಿಯೋ ಕರೆ ಮಾಡುತ್ತಿದ್ದ ಆರೋಪಿತರು, ಪೊಲೀಸ್ ಸಮವಸ್ತ್ರದಲ್ಲೇ ಹಿಂದಿ ಭಾಷೆಯಲ್ಲಿ ಮಾತನಾಡಿ ಪ್ರಕರಣದ ತನಿಖೆಯ ಹೆಸರಿನಲ್ಲಿ ಭೀತಿ ಮುಂದುವರಿಸಿದ್ದಾರೆ. ನ್ಯಾಯಾಧೀಶರು, ಸಿಬಿಐ ಅಧಿಕಾರಿಗಳು ಹಾಗೂ ಆರ್ಬಿಐ ಅಧಿಕಾರಿಗಳು ತನಿಖೆಗೆ ಬರಲಿದ್ದಾರೆ ಎಂದು ನಂಬಿಸಿ, ದಂಪತಿಯ ಬಳಿ ಇದ್ದ ಹಣ, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡಿದ್ದಾರೆ.
ತನಿಖೆಯ ನೆಪದಲ್ಲಿ ಶೇಷಾಚಲ ಅವರ ಬಳಿ ಇರುವ ಹಣವನ್ನು ತಾವು ಸೂಚಿಸುವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಆರೋಪಿತರು ಸೂಚಿಸಿದ್ದಾರೆ. ಇದನ್ನು ನಂಬಿದ ಶೇಷಾಚಲ ಅವರು ಅಕ್ಟೋಬರ್ 31ರಂದು ತಮ್ಮ ಬ್ಯಾಂಕ್ ಖಾತೆಯಿಂದ 11 ಲಕ್ಷ ರೂ.ಗಳನ್ನು ಆರ್ಟಿಜಿಎಸ್ ಮೂಲಕ ಆರೋಪಿತರು ನೀಡಿದ್ದ ಯೆಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ನವೆಂಬರ್ 5ರಂದು ಬ್ಯಾಂಕ್ ಆಫ್ ಇಂಡಿಯಾದ ಮತ್ತೊಂದು ಖಾತೆಗೆ 4,98,976 ರೂ.ಗಳನ್ನು ಆರ್ಟಿಜಿಎಸ್ ಮೂಲಕ ಜಮಾ ಮಾಡಿದ್ದಾರೆ.
ಹೀಗೆ ಪೊಲೀಸ್ ಅಧಿಕಾರಿಗಳೆಂದು ಸುಳ್ಳು ಪರಿಚಯಿಸಿಕೊಂಡು, ಬಂಧನದ ಭೀತಿ ಹುಟ್ಟಿಸಿ ತನಿಖೆಯ ಹೆಸರಿನಲ್ಲಿ ಹಣ ವರ್ಗಾಯಿಸಿಕೊಳ್ಳುವ ಮೂಲಕ ಆರೋಪಿತರು ಒಟ್ಟು 15,98,976.40 ರೂ. ವಂಚಿಸಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4), 319(2), 308(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

