ಡೈಲಿವಾರ್ತೆ: 18/ನ./2026

ಬೈಕಂಪಾಡಿಯ ಬೋಲಾಸ್ ಆಗ್ರೋ ಘಟಕದ ಮೇಲೆ ದಾಳಿ: 1,240 ಕೆ.ಜಿ. ನಕಲಿ ಅಡುಗೆ ಎಣ್ಣೆ ಜಪ್ತಿ: ಚಳ್ಳಕೆರೆಯ ಕಚ್ಚಾ ಕಡಲೆಕಾಯಿ ಎಣ್ಣೆಗೆ ‘ಕೋಲ್ಡ್ ಪ್ರೆಸ್ಡ್’ ಲೇಬಲ್ ಅಂಟಿಸಿ ಮಾರಾಟ; ಮಿಸ್‌ಬ್ರ್ಯಾಂಡಿಂಗ್ ಪತ್ತೆ

ಮಂಗಳೂರು, ನ. 18: ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಆಹಾರ ಉತ್ಪನ್ನಗಳ ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಘಟಕದಿಂದ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಘಟಕದಲ್ಲಿ ಪರಿಶೀಲನೆ ನಡೆಸಿದ ವೇಳೆ ಲೇಬಲಿಂಗ್ ಹಾಗೂ ಬ್ರ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಗಳು ಕಂಡುಬಂದಿವೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ತರಿಸಿಕೊಂಡು, ಅದಕ್ಕೆ ‘ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ’ ಎಂಬ ಲೇಬಲ್ ಅಂಟಿಸಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು ಎಂಬುದು ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ.

ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ಕೋಲ್ಡ್ ಪ್ರೆಸ್ಡ್ ಎಣ್ಣೆ ಎಂದು ನಮೂದಿಸಿ ಮಾರಾಟಕ್ಕೆ ಸಿದ್ಧಪಡಿಸುವ ಮೂಲಕ ಉತ್ಪನ್ನದ ನೈಜ ಸ್ವರೂಪದ ಬಗ್ಗೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಪ್ತಿ ಕ್ರಮ ಕೈಗೊಂಡಿದ್ದಾರೆ.

ಘಟಕದಿಂದ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 10 ಕೆ.ಜಿ. ತೂಕದ 11 ಬಾಕ್ಸ್ ಕಡಲೆಕಾಯಿ ಎಣ್ಣೆ, ತಲಾ 35 ಲೀಟರ್ ಸಾಮರ್ಥ್ಯದ 30 ಕ್ಯಾನ್ ಕಡಲೆಕಾಯಿ ಎಣ್ಣೆ ಹಾಗೂ 20 ಕೆ.ಜಿ. ತೂಕದ 4 ಬಾಕ್ಸ್ ತೆಂಗಿನ ಎಣ್ಣೆ ಸೇರಿವೆ.
ಆಹಾರ ಉತ್ಪನ್ನಗಳ ಗುಣಮಟ್ಟ, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ನಿಯಮಗಳ ಉಲ್ಲಂಘನೆಯ ವಿರುದ್ಧ ಅಧಿಕಾರಿಗಳು ಕೈಗೊಂಡಿರುವ ಈ ಕ್ರಮವು ಆಹಾರ ಸುರಕ್ಷತೆ ಹಾಗೂ ಗ್ರಾಹಕರ ಹಿತಾಸಕ್ತಿಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.