ಡೈಲಿವಾರ್ತೆ: 17/ನ./2026

ಬ್ರಹ್ಮಾವರದಲ್ಲಿ ನ. 27ರಿಂದ ಮೂರು ದಿನಗಳ ಕಾಲ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’
ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಸಂಘದ ದಶಮಾನೋತ್ಸವದ ಅಂಗವಾಗಿ ಆಯೋಜನೆ: ಆಹಾರೋದ್ಯಮ ರತ್ನ, ಉದ್ಯಮ ರತ್ನ ಪ್ರಶಸ್ತಿ ಪ್ರದಾನ

ಬ್ರಹ್ಮಾವರ, ನ. 17: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘದ ದಶಮಾನೋತ್ಸವದ ಅಂಗವಾಗಿ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’ ಅನ್ನು ನ. 27ರಿಂದ 29ರವರೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾನೂನು ಸಲಹೆಗಾರ ಹಾಗೂ ಮೇಳದ ಪ್ರಧಾನ ಸಂಚಾಲಕ ಶ್ರೀಧರ್ ಪಿ.ಎಸ್. ತಿಳಿಸಿದರು.

ಬ್ರಹ್ಮಾವರದ ಸಿಟಿ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಮೇಳ ನಡೆಯಲಿದ್ದು, ಆಹಾರೋದ್ಯಮ, ಗೃಹೋಪಯೋಗಿ ವಸ್ತುಗಳು, ಕೃಷಿ ಉತ್ಪನ್ನಗಳು ಹಾಗೂ ಸ್ಥಳೀಯ ಉದ್ಯಮಗಳ ಪ್ರದರ್ಶನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಗಳಿಗೂ ವೇದಿಕೆ ಕಲ್ಪಿಸಲಾಗಿದೆ ಎಂದರು.

ಆಹಾರೋದ್ಯಮ ಹಾಗೂ ಗೃಹೋಪಯೋಗಿ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದು, ಉದ್ಯಮಿಗಳು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಬೆಳೆಸುವುದು, ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಮೇಳದ ಪ್ರಮುಖ ಆಶಯವಾಗಿದೆ. ಅಲ್ಲದೆ, ಕರಾವಳಿಯ ಸಾಂಸ್ಕೃತಿಕ ಪರಂಪರೆ ಹಾಗೂ ಉದ್ಯಮ ಕ್ಷೇತ್ರದ ವೈವಿಧ್ಯತೆಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಮೇಳದಲ್ಲಿ ಆಹಾರೋದ್ಯಮಕ್ಕೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳು, ಉತ್ಪನ್ನಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಪ್ರದರ್ಶನ ಹಾಗೂ ಮಾರಾಟ, ಗೃಹೋಪಯೋಗಿ ವಸ್ತುಗಳ ಮಳಿಗೆಗಳು, ಕೃಷಿ ಮತ್ತು ಉದ್ಯಮ ಸಂಬಂಧಿತ ಪ್ರದರ್ಶನಗಳು ಇರಲಿವೆ. ವಿವಿಧ ಆಹಾರ ಪದಾರ್ಥಗಳ ಸವಿಯೂಟ, ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳ ವಿಶೇಷ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ಆಟಗಳು ಸಾರ್ವಜನಿಕರ ಗಮನ ಸೆಳೆಯಲಿವೆ ಎಂದರು.

ನ. 27ರಂದು ಮೆರವಣಿಗೆ, ಉದ್ಘಾಟನೆ ಮತ್ತು ದಶಮಾನೋತ್ಸವ ಕಾರ್ಯಕ್ರಮ:
ಮೇಳದ ಉದ್ಘಾಟನಾ ದಿನವಾದ ನ. 27ರಂದು ಸಂಜೆ 4.30ಕ್ಕೆ ಬ್ರಹ್ಮಾವರದ ಕುಂಜಾಲು ಸರ್ಕಲ್‌ನಿಂದ ಪುರಮೆರವಣಿಗೆ ಆರಂಭಗೊಂಡು ಹಳೆ ಬಸ್ ನಿಲ್ದಾಣದ ಮೂಲಕ ಗಾಂಧಿ ಮೈದಾನ ತಲುಪಲಿದೆ. ಸಂಜೆ 6 ಗಂಟೆಗೆ ಅರೆಹೊಳೆ ಪ್ರತಿಷ್ಠಾನದ ನೃತ್ಯೋಪಾಸನೆ ಹಾಗೂ ಮಂಗಳೂರಿನ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 6.30ಕ್ಕೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮೇಳವನ್ನು ಉದ್ಘಾಟಿಸಲಿದ್ದಾರೆ. ಆಹಾರೋದ್ಯಮ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಗೃಹೋಪಯೋಗಿ ವಸ್ತುಗಳ ಮಳಿಗೆಗಳನ್ನು ಶಾಸಕ ಯಶಪಾಲ್ ಸುವರ್ಣ ಹಾಗೂ ಆಹಾರ ಮೇಳವನ್ನು ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಉದ್ಘಾಟಿಸಲಿದ್ದಾರೆ.
ರಾತ್ರಿ 7 ಗಂಟೆಗೆ ಸಂಘದ ದಶಮಾನೋತ್ಸವದ ಅಂಗವಾಗಿ ‘ದಶರುಚಿ-2026’ ಸಭಾ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ, ಉದ್ಯಮ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 8.30ರಿಂದ ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.

ನ. 28ರಂದು ದಶರುಚಿ ಸಿಂಹಾವಲೋಕನ ಸಭೆ
ಎರಡನೇ ದಿನವಾದ ನ. 28ರಂದು ಸಂಜೆ 5.45ರಿಂದ
ಯಕ್ಷಗಾನ, ನಾಟ್ಯ, ಹಾಸ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ‘ದಶರುಚಿ ಸಿಂಹಾವಲೋಕನ’ ಸಭೆ ಆಯೋಜಿಸಲಾಗಿದ್ದು, ಸಂಘದ ಉಪಾಧ್ಯಕ್ಷ ಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ದಿಕ್ಸೂಚಿ ಭಾಷಣ ಮಾಡಲಿದ್ದು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಶಯ ನುಡಿಗಳನ್ನಾಡಲಿದ್ದಾರೆ. ಮೇಳದ ಪ್ರಧಾನ ಸಂಚಾಲಕ ಶ್ರೀಧರ್ ಪಿ.ಎಸ್. ಮೇಳದ ಉದ್ದೇಶ, ಸಾಧನೆ ಹಾಗೂ ಸಂಘದ ಹತ್ತು ವರ್ಷಗಳ ಕಾರ್ಯಚಟುವಟಿಕೆಗಳ ಅವಲೋಕನ ಮಂಡಿಸಲಿದ್ದಾರೆ. ರಾತ್ರಿ 9.30ಕ್ಕೆ ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ‘ವಿನಾದ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನ. 29ರಂದು ಸಮಾರೋಪ, ಸಾಧಕರಿಗೆ ಸನ್ಮಾನ:
ಮೂರನೇ ದಿನವಾದ ನ. 29ರಂದು ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಸಾಧಕರಿಗೆ ಸನ್ಮಾನ ನೆರವೇರಿಸಲಿದ್ದಾರೆ. ಶಾಸಕರಾದ ವಿ. ಸುನೀಲ್ ಕುಮಾರ್, ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾತ್ರಿ 8.30ಕ್ಕೆ ‘ಉಡುಪಿ ಸರಿಗಮಪ’ ಸಂಗೀತ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಖ್ಯಾತ ಗಾಯಕರು ಮತ್ತು ಸಂಗೀತ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.

ಆಹಾರೋದ್ಯಮ ರತ್ನ, ಉದ್ಯಮ ರತ್ನ ಪ್ರಶಸ್ತಿ ಪ್ರದಾನ:
ಸಂಘದ ದಶಮಾನೋತ್ಸವದ ವಿಶೇಷವಾಗಿ ಆಹಾರೋದ್ಯಮ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ‘ಆಹಾರೋದ್ಯಮ ರತ್ನ’ ಹಾಗೂ ‘ಉದ್ಯಮ ರತ್ನ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಮೇಳದಲ್ಲಿ ವಿವಿಧ ಉತ್ಪನ್ನಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮಳಿಗೆಗಳ ಮೂಲಕ ಹೊಸ ಉತ್ಪನ್ನಗಳು, ಆಧುನಿಕ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನಗಳ ಪರಿಚಯವಾಗಲಿದೆ. ಇದರಿಂದ ಸ್ಥಳೀಯ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮತ್ತು ಉದ್ಯಮದ ವಿಸ್ತರಣೆಗೆ ಅವಕಾಶ ದೊರೆಯಲಿದೆ.

ಆಹಾರ, ಉದ್ಯಮ, ಕೃಷಿ, ಖರೀದಿ, ಮನರಂಜನೆ ಹಾಗೂ ಸಾಂಸ್ಕೃತಿಕ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಮೇಳವು ಸಾರ್ವಜನಿಕರಿಗೆ ವಿಶಿಷ್ಟ ಅನುಭವ ನೀಡಲಿದೆ. ಜಿಲ್ಲೆಯ ಉದ್ಯಮಿಗಳು, ಗ್ರಾಹಕರು ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಧರ್ ಪಿ.ಎಸ್. ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿಸೋಜ, ಗೌರವಾಧ್ಯಕ್ಷ ಲಾಲ್ಟರ್ ಸಲ್ಡಾನ, ಮಂಜುನಾಥ್ ಕಾಮತ್, ದಿವಾಕರ ಸನಿಲ್, ರಿತೇಶ್ ಸುವರ್ಣ, ಉದಯಕುಮಾರ್ ಶೆಟ್ಟಿ, ಚಂದ್ರಶೇಖರ್, ದುರ್ಗಾ ಪ್ರಸಾದ್, ಸೋಮಶೇಖರ್, ಸಂತೋಷ್ ದೇವಾಡಿಗ ನಾಗೂರು, ಉದಯಕುಮಾರ್ ನಾಯಕ್, ಕೆ.ಪಿ. ಶ್ರೀಶನ್, ಶಶಿಧರ್ ಗಾಣಿಗ ಹಾರಾಡಿ, ಸಂತೋಷ್ ಪೂಜಾರಿ, ಹಸನ್ ಬೆಳ್ಮನ್, ಕೃಷ್ಣ ನಾಯ್ಕ್ ಚಾರ, ಕೀರ್ತಿ ಕುಮಾರ್, ವಿಶ್ವನಾಥ ಕೋಟೇಶ್ವರ, ಗಣಪತಿ ಮರಕಾಲ, ಸತ್ಯಪ್ರಸಾದ್ ಶೆಣೈ, ಕೃಷ್ಣ ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಸುದೇವ ಶೆಟ್ಟಿ ಉಪಸ್ಥಿತರಿದ್ದರು.