ಡೈಲಿ ವಾರ್ತೆ: 15/Jan/2024

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ: ವಿದ್ಯಾರ್ಥಿಗಳು ದೇಶದ ನಿಜವಾದ ಆಸ್ತಿಯಾಗಲು ಶಿಕ್ಷಣದಿಂದ ಸಾಧ್ಯ – ಎಚ್.ಕೆ.ಪಾಟೀಲ್‌

ಕುಂದಾಪುರ: ನಮ್ಮ ದೇಶದ ದೊಡ್ಡ ಆಸ್ತಿಗಳೆಂದರೆ ಸಮುದ್ರ,ಖನಿಜ, ಭೂಮಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇವು ನಮ್ಮ ದೇಶದ ಆಸ್ತಿಯಲ್ಲ. ನಮ್ಮ ದೇಶದ ದೊಡ್ಡ ಆಸ್ತಿ ಎಂದರೆ ನಮ್ಮ ಮಕ್ಕಳು ಮತ್ತು ಯುವಕರು. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ವಿದ್ಯಾರ್ಥಿಗಳು ಈ ದೇಶದ ನಿಜವಾದ ಆಸ್ತಿಯಾಗಬೇಕು. ಪೋಷಕರು ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಅಭಿವೃದ್ಧಿಪಡಿಸಬೇಕು. ಮುಂದೆ ಅವರು ಈ ದೇಶದ ನಿಜವಾದ ಆಸ್ತಿಯಾಗುತ್ತಾರೆ. ಆದುದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಕಾರ್ಯ ಮಾಡಬೇಕು ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಜ. 14 ರಂದು ಭಾನುವಾರ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ನೂತನವಾಗಿ ನಿರ್ಮಾಣಗೊಂಡ ‘ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್’ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಗಳ ನೂತನ ಲಾಂಛನವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಸಮಾಜದದಲ್ಲಿ ಭಾತೃತ್ವ ಬಿತ್ತಬೇಕು. ಮಕ್ಕಳ ಮನಸ್ಸಿನಲ್ಲಿ ದ್ವೇಷದ ಬದಲು ಪ್ರೀತಿ ಬೆಳೆಸಬೇಕು. ಆ ಮೂಲಕ ದೇಶ ಕಟ್ಟುವ ಕಾರ್ಯ ಮಾಡಬೇಕು. ಮಕ್ಕಳ ಮನಸ್ಸಿನಲ್ಲಿ ದೇಶಾಭಿಮಾನವನ್ನು ಗಟ್ಟಿ ಗೊಳಿಸಬೇಕು. ಆದುವೇ ನಿಜವಾದ ದೇಶ ಕಟ್ಟುವ ಕಾರ್ಯವಾಗಿದೆ. ಆ ನಿಟ್ಟಿನಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.

ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ರವರು “ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್” ನ ನೂತನ ಮಹಾದ್ವಾರವನ್ನು ಉದ್ಘಾಟಿಸಿದರು.
ಅವರು ಮಾತನಾಡಿ ಸಮಾಜದಲ್ಲಿ ಸಹೋದರತೆ, ಸಮಾನತೆ, ಪ್ರೀತಿ, ವಿಶ್ವಾಸದಿಂದ ಬಾಳುವಂತಹ ಜಾತ್ಯತೀತ ಶಿಕ್ಷಣ ನೀಡುವ ಸಂಸ್ಥೆಗಳು ನಮ್ಮ ದೇಶಕ್ಕೆ ಅತೀ ಆಗತ್ಯ. ಇಂದು ಶಿಕ್ಷಣ ಪಡೆದವರೇ ಹೆಚ್ಚು ಕಂಟಕರಾಗುತ್ತಿದ್ದಾರೆ. ಆದುದರಿಂದ ಶಿಕ್ಷಣ ಸಂಸ್ಥೆಗಳು ಜಾತ್ಯತೀತ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಕಲಿಸಬೇಕು. ಆ ಕಾರ್ಯವನ್ನು ಇಂದು ಬ್ಯಾರೀಸ್ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಬಲಿಷ್ಠವಾದಾಗ ಮಾತ್ರ ಈ ದೇಶ ಬಲಿಷ್ಠ ಆಗಲು ಸಾಧ್ಯ. ಅದಕ್ಕೆ ಪೂರಕವಾದ ಶಿಕ್ಷಣವನ್ನು ಬ್ಯಾರೀಸ್ ಸಂಸ್ಥೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ, ಈ ಸಂಸ್ಥೆ ಯನ್ನು ಸಮಾಜದಲ್ಲಿ ನೆಮ್ಮದಿ ಮೂಡಿಸುವಂತಹ ವಿಶ್ವವಿದ್ಯಾನಿಲಯ ವನ್ನಾಗಿ ಬೆಳೆಸುವ ಯೋಚನೆ ನಮ್ಮ ಮುಂದಿದೆ. ನಮ್ಮ ಸಂಸ್ಥೆಗಳ ನೇತೃತ್ವದಲ್ಲಿ ಕಳೆದ 28 ತಿಂಗಳಿಗಳಿಂದ ಕೋಡಿ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಇದರ ಪರಿಣಾಮ ಕಡಲಾಮೆಗಳು ಬೀಚ್ ಗೆ ಬಂದು ಮೊಟ್ಟೆ ಇಡುವ ಪ್ರಮಾಣ ಹೆಚ್ಚಾಗುತ್ತಿದೆ ಎಂದರು. ಕೋಡಿ ಊರನ್ನು ಸಿಗರೇಟು, ಗಾಂಜಾ, ಮದ್ಯಮುಕ್ತ ಪ್ರದೇಶವನ್ನಾಗಿ ಮಾಡಿ ಮಹಾತ್ಮ ಗಾಂಧಿಯ ರಾಮರಾಜ್ಯವನ್ನು ಸ್ಥಾಪಿಸಬೇಕು. ಆ ರಾಮರಾಜ್ಯದಲ್ಲಿ ಪ್ರೀತಿ, ವಿಶ್ವಾಸ, ಪರಿ ಶ್ರಮ, ಕೊಡುವಿಕೆ ಇರಬೇಕು. ಸತ್ಯ, ನ್ಯಾಯ, ಸಮಾನತೆಯೊಂದಿಗೆ
ಎಲ್ಲರೂ ಒಗ್ಗಟ್ಟಿನಲ್ಲಿ ಈ ಬಗ್ಗೆ ಕ್ರಾಂತಿ ಮಾಡಬೇಕು. ಅನ್ಯೋನತೆಯಿಂದ ಬದುಕಿ ಇಡೀ ಪ್ರಪಂಚಕ್ಕೆ ತೋರಿಸಬೇಕು ಎಂದು ಅವರು ಹೇಳಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಸಂಸ್ಥೆಯ ಧ್ವಜಾರಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪರಿಸರವಾದಿ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿಯವರನ್ನು ಸನ್ಮಾನಿಸಲಾಯಿತು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್ ರಹ್ಮಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಸಿದ್ದೀಕ್ ಬ್ಯಾರಿ, ಡಾ. ಆಸಿಫ್ ಬ್ಯಾರಿ, ಬ್ಯಾರಿಸ್ ಸಂಸ್ಥೆಯ ಬಿ. ಎಡ್. ವಿಭಾಗದ ಪ್ರಾಂಶುಪಾಲ ಸಿದ್ದಪ್ಪ, ಬ್ಯಾರೀಸ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ಶೆಟ್ಟಿ ಎ.ಎಚ್‌.ಎಂ. ಬ್ಯಾರಿ ಮೆಮೋರಿಯಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯಶೀಲ ಶೆಟ್ಟಿ, ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜತ್ತಪ್ಪ ಉಪಸ್ಥಿತರಿದ್ದರು.

ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು.
ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೌಸ್ ವಾರ್ಷಿಕ ವರದಿ ವಾಚಿಸಿದರು. ಪಿಯು ಕಾಲೇಜಿನ ಉಪನ್ಯಾಸಕಿ ಝಿಯಾನ ಬಹುಮಾನಿತರ ಪಟ್ಟಿ ವಾಚಿಸಿದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕ ಹಯವದನ ಉಪಾಧ್ಯ ಹಾಗೂ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.