ಡೈಲಿ ವಾರ್ತೆ: 05/Feb/2024

ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ರಿಕ್ಷಾಕ್ಕೆ ಡಿಕ್ಕಿಹೊಡೆದು ಚರಂಡಿಗೆ ಬಿದ್ದ ಬಸ್ – ಪ್ರಯಾಣಿಕರಿಗೆ ಗಾಯ

ಬಂಟ್ವಾಳ : ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸೊಂದು ನಿಲ್ಲಿಸಿದ್ದ ರಿಕ್ಷಾ ವೊಂದಕ್ಕೆ ಡಿಕ್ಕಿಯಾಗಿ ಬಳಿಕ ಚರಂಡಿಗೆ ಬಿದ್ದ ಘಟನೆ ಪುಂಜಾಲಕಟ್ಟೆ ಸಮೀಪದ ಎನ್.ಸಿ.ರೋಡ್ ನಲ್ಲಿ ಸೋಮವಾರ ಸಂಜೆ ನಡೆದಿದೆ.

ಘಟನೆಯಿಂದ ನಾಲ್ವರು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆ‌.ಎಸ್.ಆರ್.ಟಿ.ಸಿ ಬಸ್ ನ ಚಕ್ರ ಎನ್.ಸಿ.ರೋಡ್ ತಲುಪುತ್ತಿದ್ಧಂತೆ ಸ್ಪೋಟಗೊಂಡ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದೆ ಎಂದು ಬಸ್ ನ ಚಾಲಕ ತಿಳಿಸಿದ್ದಾರೆ. ಇದರಿಂದಾಗಿ ಬಸ್ ರಸ್ತೆ ಬದಿ ನಿಲ್ಲಿಸಲಾಗಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ರಿಕ್ಷಾ ಕೂಡಾ ಪಲ್ಟಿಯಾಗಿದೆ.

ಅದೃಷ್ಟವಶಾತ್ ರಿಕ್ಷಾದಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕ ಪಕ್ಕದ ಅಂಗಡಿಗೆ ಹೋಗಿದ್ದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.