



ಡೈಲಿ ವಾರ್ತೆ: 07/Feb/2024


ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ಸಾಲ ಪಡೆದು ವಂಚನೆ – ಇಬ್ಬರ ವಿರುದ್ಧ ಪ್ರಕರಣ ದಾಖಲು
ಕಡಬ: ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಸಹಕಾರಿ ಸಂಘಗಳಿಗೆ ಲಕ್ಷಗಟ್ಟಲೆ ರೂಪಾಯಿ ವಂಚನೆ ಎಸಗಿದ ಬಗ್ಗೆ ಇಬ್ಬರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರು ದೂರು ನೀಡಿದ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಜ. 27ರಂದು ಮಧ್ಯಾಹ್ನ ಆರೋಪಿಗಳಾದ ನೆಲ್ಯಾಡಿ ಗ್ರಾಮದವರು ಎನ್ನಲಾಗಿರುವ ಕಡಬ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು ಸಂಘಕ್ಕೆ ಬಂದಿದ್ದು, ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಾರದಂತಹ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಸಂಘದಲ್ಲಿ ಅಡಮಾನವಿರಿಸಿ, ಸಂಘದಿಂದ 1.40 ಲಕ್ಷ ರೂಪಾಯಿ ಸಾಲವಾಗಿ ಪಡೆದು ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ನೆಲ್ಯಾಡಿ ಮಾತ್ರವಲ್ಲದೆ, ಕಡಬ ಮತ್ತು ಉಪ್ಪಿನಂಗಡಿಯ ಸಹಕಾರಿ ಸಂಘಗಳಿಗೂ ಇವರು ವಂಚಿಸಿ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದಾಗಿ ಆರೋಪಿಸಲಾಗಿದೆ. ಉಪ್ಪಿನಂಗಡಿಯ ಒಡಿಯೂರು ಸಹಕಾರಿ ಸಂಘದಲ್ಲಿ 1.70 ಲಕ್ಷ ರೂ. ಸಾಲ, ಕಡಬದ ಅಲಂಕಾರು ಒಕ್ಕಲಿಗ ಸಹಕಾರಿ ಸಂಘಗಳಲ್ಲೂ ನಕಲಿ ಚಿನ್ನ ಅಡವಿಟ್ಟು 1.35 ಲಕ್ಷ ರೂ. ಸಾಲ ಪಡೆದಿರುವುದಾಗಿ ಆರೋಪಿಸಲಾಗಿದೆ.
ವಿವಿಧ ಸಹಕಾರಿ ಸಂಘಗಳಿಂದ ದೂರುಗಳು ಬಂದಿರುವರಿಂದ ಈ ಪ್ರಕರಣದಲ್ಲಿ ಸಹಕಾರಿ ಸಂಘಗಳ ಚಿನ್ನಾಭರಣ ಪರಿಶೀಲನಾಗಾರರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಕಡಬ,ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ವಂಚನಾ ಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದೆ.