ಡೈಲಿ ವಾರ್ತೆ: 13/Feb/2024
ಹೆಲ್ಮೆಟ್ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್ ಪೊಲೀಸ್ ಕೈ ಬೆರಳನ್ನೇ ಕಚ್ಚಿದ ಭೂಪ!
ಬೆಂಗಳೂರು: ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಕೈ ಬೆರಳನ್ನೇ ಕಚ್ಚಿದ ಪ್ರಸಂಗವೊಂದು ಬೆಂಗಳೂರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಈ ಘಟನೆ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಬಳಿ ಜರುಗಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ.
ನಡೆದಿದ್ದೇನು..?: 28 ವರ್ಷದ ಸಯ್ಯದ್ ಸಫಿ ಎಂಬಾತ ಹೆಲ್ಮೆಟ್ ಇಲ್ಲದೇ ಸ್ಕೂಟಿ ಚಲಾಯಿಸುತ್ತಿದ್ದ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಆತನನ್ನು ತಡೆದಿದ್ದಾರೆ. ಬಳಿಕ ಪೇದೆ ಆತನ ಬಳಿಯಿಂದ ಕೀ ಕಿತ್ತುಕೊಂಡಿದ್ದಾರೆ. ಹೆಡ್ ಕಾನ್‌ಸ್ಟೆಬಲ್ ಸಿದ್ದರಾಮೇಶ್ವರ ಕೌಜಲಗಿ ಅವರು ಟ್ರಾಫಿಕ್ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಳ್ಳಲು ವೀಡಿಯೋ ಮಾಡಿದ್ದಾರೆ.
ಕೀ ಕಿತ್ತುಕೊಂಡಿದ್ದಕ್ಕೆ ಸಿಟ್ಟಿಗೆದ್ದ ಯುವಕ, ಟ್ರಾಫಿಕ್ ಪೊಲೀಸ್ ಕೈ ಬೆರಳನ್ನೇ ಕಚ್ಚಿದ್ದಾನೆ. ಇತ್ತ ಹೆಡ್ ಕಾನ್‌ಸ್ಟೆಬಲ್‌ನ ಫೋನ್ ಕಿತ್ತುಕೊಂಡ ಸಯ್ಯದ್ ಸಫಿ, ತನ್ನ ವೀಡಿಯೋ ಯಾಕೆ ರೆಕಾರ್ಡ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಕೂಡಲೇ ಆತನನ್ನು ಹಿಡಿದು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ವಿಲ್ಸನ್ ಗಾರ್ಡನ್ 10ನೇ ಕ್ರಾಸ್‌ನಲ್ಲಿ ಟ್ರಾಫಿಕ್ ಪೇದೆಯನ್ನು ನಿಂದಿಸಿ, ಬೆರಳನ್ನು ಕಚ್ಚಿ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿದ ಮತ್ತು ದೈಹಿಕವಾಗಿ ನೋವುಂಟು ಮಾಡಿದ ಆರೋಪದ ಮೇಲೆ ಶಫಿ ವಿರುದ್ಧ (ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಭಂಗ) ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.