ಡೈಲಿ ವಾರ್ತೆ: 14/Feb/2024
ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ 7,000 ರೂ. ವರ್ಗಾವಣೆ: ದಿನೇಶ್ ಗುಂಡೂರಾವ್ ಭರವಸೆ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ಮಾಡಿ ಅಹವಾಲು ಆಲಿಸಿದರು.
ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗಳಿಗೆ ಈಗಿರುವ 5,000 ರೂ.ಗೆ ಬದಲಾಗಿ 7,000 ರೂ. ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗುವುದು. ಹೀಗಾಗಿ ಪ್ರತಿಭಟನೆ ಹಿಂಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಆದರೆ, ಪಟ್ಟು ಬಿಡದ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಶೇ 50 ರಷ್ಟು ಆಶಾ ಕಾರ್ಯಕರ್ತೆಯರಿಗೆ ಅವರು ಮಾಡಿದ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ ಎಂದು ಅವರು ಆರೋಪಿದ್ದಾರೆ. ಅಲ್ಲದೆ, ರಿಪ್ರೊಡಕ್ಟಿವ್ ಆ್ಯಂಡ್ ಚೈಲ್ಡ್ ಹೆಲ್ತ್ (ಆರ್‌ಸಿಎಚ್) ಪೋರ್ಟಲ್ ಅನ್ನು ಪಾವತಿ ಪ್ರಕ್ರಿಯೆಯಿಂದ ಡಿಲಿಂಕ್ ಮಾಡಿ, 15,000 ರೂ. ನಿಗದಿತ ಗೌರವಧನವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
7,000 (ಅಸ್ತಿತ್ವದಲ್ಲಿರುವ 5,000 ರೂ. ಗೌರವಧನ ಮತ್ತು 2,000 ರೂ. ನಾನ್-ಎಂಸಿಟಿಎಸ್ ಒಟ್ಟಿಗೆ ಸೇರಿಸಿ) ನೇರವಾಗಿ ವರ್ಗಾವಣೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತಮ್ಮ ಚಟುವಟಿಕೆಗಳನ್ನು ಅಪ್‌ಲೋಡ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುವ ಸಾಫ್ಟ್‌ವೇರ್ ಅನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದ್ದಾರೆ.
ನೂತನ ಸಾಫ್ಟ್ವೇರ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಆಶಾ ಕಾರ್ಯಕರ್ತೆಯರಿಗೆ ನಿಗದಿತ ಗೌರವಧನವನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.