ಡೈಲಿ ವಾರ್ತೆ: 17/Feb/2024

ಹುಬ್ಬಳ್ಳಿ ಗಲಭೆ ಪ್ರಕರಣ: 108 ಆರೋಪಿಗಳಿಗೆ ಜಾಮೀನು, ದರ್ಗಾದಲ್ಲಿ ಸಂಭ್ರಮಾಚರಣೆ

ಹುಬ್ಬಳ್ಳಿ: ಇಡೀ ರಾಜ್ಯದಲ್ಲಿ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಗಲಾಟೆ ಮತ್ತೆ ಸುದ್ದಿಯಲ್ಲಿದ್ದು, ಗಲಭೆಯ ಆರೋಪಿಗಳಿಗೆ ಬರೋಬ್ಬರಿ ಎರಡು ವರ್ಷದ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 108 ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಉಳಿದ ಮೂವರು ಆರೋಪಿಗಳ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಕಾರಣ ಜಾಮೀನು ವಿಳಂಬವಾಗಿದೆ. ಬೆಳಗಾವಿ-ಬಳ್ಳಾರಿ ಜೈಲಿಂದ 108 ಆರೋಪಿಗಳು ಶೀಘ್ರವೇ ಬಿಡುಗಡೆ ಆಗಲಿದ್ದಾರೆ.

ವಾಟ್ಸಪ್ ಸ್ಟೇಟಸ್ ವಿಚಾರವಾಗಿ 2022ರ ಏಪ್ರಿಲ್ 16ರಂದು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಠಾಣೆ ಎದುರು ಬೆಂಗಳೂರಿನ ಕೆಜಿ ಹಳ್ಳಿ ಮಾದರಿಯಲ್ಲಿಯೇ ಗಲಭೆ ನಡೆದಿತ್ತು. ಈ ಪ್ರಕರಣದಲ್ಲಿ 152 ಮಂದಿ ಜೈಲು ಸೇರಿದ್ದರು. 2 ತಿಂಗಳ ಹಿಂದೆ ಸುಪ್ರೀಂಕೋರ್ಟ್ 31 ಆರೋಪಿಗಳಿಗೆ ಜಾಮೀನು ನೀಡಿತ್ತು.
ಉಳಿದ 108 ಆರೋಪಿಗಳಿಗೆ ಜಾಮೀನಿಗಾಗಿ ಹೋರಾಟ ನಡೆಸಿತ್ತು. ಆದರೆ ಈ ಭಾನುವಾರ ಅಂಜುಮನ್ ಸಂಸ್ಥೆಗೆ ಚುನಾವಣೆ ಹಿನ್ನೆಲೆ ಉಳಿದ ಆರೋಪಿಗಳಿಗೆ ಜಾಮೀನು ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದರು. ಇದೇ ತಿಂಗಳ 5 ರಂದು ನಡೆದ ನಾಮಪತ್ರ ಸಲ್ಲಿಕೆ ವೇಳೆ ಹೈಡ್ರಾಮಾ ನಡೆದಿತ್ತು. ಕೊನೆಗೆ ಕುಟುಂಬಸ್ಥರ ಒತ್ತಡಕ್ಕೆ ಮಣಿದು ಆರೋಪಿಗಳಿಗೆ ಜಾಮೀನು ನೀಡಲು ಅಂಜುಮನ್ ಸಂಸ್ಥೆ ಮುಂದಾಗಿತ್ತು.
ಆರೋಪಿಗಳಿಗೆ ಜಾಮೀನು ಮಂಜೂರು ಸುದ್ದಿ ತಿಳಿಯುತ್ತಿದ್ದಂತೆ ಹಳೆ ಹುಬ್ಬಳ್ಳಿಯ ದರ್ಗಾದಲ್ಲಿ ಮುಸ್ಲಿಮರು ಸಂಭ್ರಮಾಚರಣೆಗಳನ್ನು ಮಾಡಿಕೊಂಡಿದ್ದಾರೆ. ಆರೋಪಿಗಳ ಕುಟುಂಬಸ್ಥರು ಮತ್ತು ಅಂಜುಮನ್ ಇಸ್ಲಾಮಿಕ್ ಸಂಸ್ಥೆ ಮುಖಂಡರು ಪರಸ್ಪರ ಸಿಹಿ ತಿನ್ನಿಸಿಕೊಂಡು ಖುಷಿ ಪಟ್ಟಿದ್ದಾರೆ. ಅಂಜುಮನ್ ಮುಖಂಡರಿಗೆ ಹಾರ ಹಾಕಿ ಅಭಿನಂದಿಸಿದ್ದಾರೆ.