ಡೈಲಿ ವಾರ್ತೆ: 20/Feb/2024
ರಾಮನಗರ: ಡಿಸಿ ಕಚೇರಿಗೆ ವಕೀಲರ ದಿಗ್ಬಂಧನ – ಮನೆಗೆ ಹೋಗಲಾಗದೆ ಕಚೇರಿಯಲ್ಲೇ ಕುಳಿತ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ರಾಮನಗರ: ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ವಕೀಲರ ಪ್ರತಿಭಟನೆ ತೀವ್ರಗೊಂಡಿದ್ದು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಉಳಿದುಕೊಳ್ಳುವಂತಾಗಿದೆ.
ಎರಡೂ ಗೇಟ್ ಮುಂಭಾಗದಲ್ಲಿ ವಕೀಲರು ಧರಣಿ ಕುಳಿತಿದ್ದು
ಡಿಸಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಕಾರ್ತಿಕ್ ರೆಡ್ಡಿ ಮನೆಗೆ ಹೋಗದ ಹಾಗೆ ಮಾಡಲಾಗಿದೆ.
ತನಿಖೆ ಮಾಡಿ ಕ್ರಮ ಕೈಗೊಳ್ತೇವೆ ಎಂದ ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಕೀಲರು: ಡಿಸಿ, ಎಸ್‌ಪಿ ಸೇರಿ ಅಧಿಕಾರಿಗಳಿಗೆ ರಾಜಕೀಯ ಒತ್ತಡ ಇದೆ. ಡಿಸಿಎಂ ಡಿಕೆ ಶಿವಕುಮಾರ್, ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ಒತ್ತಡಕ್ಕೆ ಮಣಿದಿದ್ದಾರೆ. ಈ ಕಾರಣಕ್ಕೆ ವಿಧಾನಸೌಧ ಚಲೋಗೆ ಕರೆ ನೀಡುತ್ತಿದ್ದೇವೆ. ಈ ವೇಳೆ ಏನೇ ತೊಂದರೆ ಆದರೂ ರಾಮನಗರ ಜಿಲ್ಲಾಡಳಿತ ಹೊಣೆ ಎಂದು ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಎಚ್ಚರಿಕೆ ನೀಡಿದ್ದಾರೆ.
ಏನಿದು ಪ್ರಕರಣ?
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾರ ಕಡೆಯೊಬ್ಬರು ನೀಡಿದ್ದ ಸುಳ್ಳು ದೂರಿನ ಆಧಾರದ ಮೇಲೆ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದರು.