ಡೈಲಿ ವಾರ್ತೆ: 21/Feb/2024

ಫೆಬ್ರವರಿ 23, 24 ರಂದು ಮಣಿಪುರ- ಕಟಪಾಡಿಯಲ್ಲಿ ಜಲಾಲಿಯ್ಯಾ ದ್ಸಿಕ್ರ್, ಅನುಸ್ಮರಣಾ ಮಜ್ಲಿಸ್, ಮುಹಿಯುದ್ದೀನ್ ಮಾಲೆ ಆಲಾಪನೆ ಹಾಗೂ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ

ಉಡುಪಿ : ಉಡುಪಿ ಜಿಲ್ಲೆಯ ಕಟಪಾಡಿ – ಮಣಿಪುರದ ರಹ್ಮಾನಿಯಾ ಜುಮಾ ಮಸೀದಿ ಅಧೀನದಲ್ಲಿರುವ ಖಲಂದರ್ ಷಾ ದಫ್ ಸಮಿತಿಯ ಆಶ್ರಯದಲ್ಲಿ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ಫೆಬ್ರವರಿ 23 ಹಾಗೂ 24 ರಂದು ಇಲ್ಲಿನ ಮಸೀದಿ ವಠಾರದಲ್ಲಿ ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.

ಫೆ 23 ರಂದು ಜಲಾಲಿಯ್ಯಾ ದ್ಸಿಕ್ರ್ ಮಜ್ಲಿಸ್ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ, ಪೋಸೋಟು ತಂಙಳ್, ಬೇಕಲ್ ಉಸ್ತಾದ್ ಅನುಸ್ಮರಣಾ ಮಜ್ಲಿಸ್ ನಡೆಯಲಿದೆ. ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ಅವರು ದುಆ ಹಾಗೂ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. ಮಸೀದಿ ಅಧ್ಯಕ್ಷ ರಫೀಕ್ ಕೆ ಶಾಬಾನ್ ಅಧ್ಯಕ್ಷತೆ ವಹಿಸುವರು. ಮಣಿಪುರ ಮಸೀದಿ ಖತೀಬ್ ಇಬ್ರಾಹಿಂ ಮದನಿ ಅಲ್-ಹುಮೈದಿ ಉದ್ಘಾಟಿಸುವರು. ಕಟಪಾಡಿ ಮಸೀದಿ ಖತೀಬ್ ಹಾಜಿ ಬಶೀರ್ ಮದನಿ ಅನುಸ್ಮರಣಾ ಭಾಷಣಗೈಯುವರು.

ಫೆ 24 ರಂದು ಮುಹಿಯುದ್ದೀನ್ ಮಾಲೆ ಆಲಾಪಣೆ, ಮತ ಪ್ರವಚನ ಹಾಗೂ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಸಯ್ಯಿದ್ ಅಲವಿ ತಂಙಳ್ ಕರ್ಕಿ-ಹೊನ್ನಾವರ ದುವಾರ್ಶಿಚನಗೈಯುವರು. ಆರಿಫ್ ಸಅದಿ ಭಟ್ಕಳ ಮುಹಿಯುದ್ದೀನ್ ಆಲಾಪನೆ ನಡೆಸುವರು. ಮಣಿಪುರ ಮಸೀದಿ ಖತೀಬ್ ಇಬ್ರಾಹಿಂ ಮದನಿ ಅಲ್-ಹುಮೈದಿ ಉಪನ್ಯಾಸಗೈಯುವರು.

ದಫ್ ಸ್ಪರ್ಧಾ ವಿಜೇತರಿಗೆ ಪ್ರಥಮ ರೂ. 10,010/-, ದ್ವಿತೀಯ ರೂ. 8,010/-, ತೃತೀಯ ರೂ. 6,010/-, ಚತುರ್ಥ ರೂ. 4,010/- ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ರಹ್ಮಾನಿಯಾ ಜುಮಾ ಮಸೀದಿ ಹಾಗೂ ಖಲಂದರ್ ಷಾ ದಫ್ ಸಮಿತಿ ಪ್ರಕಟಣೆ ತಿಳಿಸಿದೆ.