ಡೈಲಿ ವಾರ್ತೆ: 25/Feb/2024

ಕೋಟೇಶ್ವರ ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ – ಪ್ರತಿಷ್ಠಾ ವರ್ಧಂತಿ – ಹಿರಿಯ ಪತ್ರಕರ್ತ ಕೆ. ಜಿ. ವೈದ್ಯರಿಗೆ ಸನ್ಮಾನ

ಕುಂದಾಪುರ : ಯಾವುದೇ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಸಂಘಗಳಿರುವುದು ಆ ದೇವಸ್ಥಾನದ ಬೆಳವಣಿಗೆಗೆ ಪೂರಕವಾಗುತ್ತದೆ. ಕೋಟೇಶ್ವರದ ಐತಿಹಾಸಿಕ ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನದಲ್ಲೂ ಸಾಂಸ್ಕೃತಿಕ ಸಂಘ ರಚನೆಯಾದ ಮೇಲೆ ಅದರ ಅಭಿವೃದ್ಧಿ ವೇಗ ಪಡೆದುಕೊಂಡಿದೆ. 32 ವರ್ಷಗಳ ಸುದೀರ್ಫ ಅವಧಿಯಲ್ಲಿ ದೇವಸ್ಥಾನವು ಗೋಪುರ, ಶ್ರೀ ದೇವಿಗೆ ವಿವಿಧ ಆಭರಣ, ಭಕ್ತಾದಿಗಳಿಗೆ ಅನುಕೂಲ ಇತ್ಯಾದಿಗಳನ್ನು ಹೊಂದಿ ಅಭಿವೃದ್ಧಿಯ ಪಥದಲ್ಲಿ ಸಾಗಿದೆ – ಎಂದು ಶ್ರೀ ಮಾರಿಯಮ್ಮ ಸಾಂಸ್ಕೃತಿಕ ಸಂಘದ ಸ್ಥಾಪಕ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಕೆ. ಜಿ. ವೈದ್ಯ ಹೇಳಿದರು.

ಶ್ರೀ ಮಹಾದೇವಿ ಮಾರಿಯಮ್ಮ ದೇವಾಲಯದಲ್ಲಿ 20 ನೇ
ವರ್ಷದ ಪುನರ್ ಪ್ರತಿಷ್ಠಾ ವರ್ಧ0ತ್ಯೋತ್ಸವ ಮತ್ತು ಶ್ರೀ ಮಾರಿಯಮ್ಮ ಸಾಂಸ್ಕೃತಿಕ ಸಂಘದ 32 ನೇ ವಾರ್ಷಿಕೋತ್ಸವದಂಗವಾಗಿ ಆಯೋಜಿಸಿದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಕೃತಜ್ಞತೆಯ ನುಡಿಗಳನ್ನಾಡಿದರು.

32 ವರ್ಷಗಳ ಹಿಂದೆ ಸಾಂಸ್ಕೃತಿಕ ಸಂಘವನ್ನು ಹುಟ್ಟುಹಾಕುವಲ್ಲಿ ಸಹಕರಿಸಿದವರನ್ನು ಅವರು ಸ್ಮರಿಸಿಕೊಂಡರು.

ಮುಖ್ಯ ಅತಿಥಿ ಡಾ. ರಾಜೇಶ್ ಶೆಟ್ಟಿ ಮಾತನಾಡಿ,
ಸಾಂಸ್ಕೃತಿಕ ಸಂಘವನ್ನು 32 ವರ್ಷಗಳ ಕಾಲ ಮುನ್ನಡೆಸಿ, ಆ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ, ದೇವಾಲಯ ಮತ್ತು ಊರ ಅಭಿವೃದ್ಧಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಿರುವ ಶ್ರೀ ಮಾರಿಯಮ್ಮ ಸಾಂಸ್ಕೃತಿಕ ಸಂಘದ ಎಲ್ಲರನ್ನೂ ಅಭಿನಂದಿಸಿದರು.

ದೇವಾಲಯದ ಆಡಳಿತ ಮೊಕ್ತೇಸರ ರಮೇಶ್ ಪೈ ಪ್ರಸ್ತಾವನೆಗೈದು, ದಾನಿಗಳ ನೆರವಿನಿಂದ ಶ್ರೀ ದೇವಿಗೆ ಸ್ವರ್ಣ ಮುಖವಾಡ ಸಮರ್ಪಿಸಲು ಸಂಕಲ್ಪಿಸಿರುವುದಾಗಿ ತಿಳಿಸಿದರು.

ಜ್ಯೋತಿಷ್ಯ ಆಚಾರ್ಯ ವಿದ್ವಾನ್ ಡಾ. ರಾಮಕೃಷ್ಣ ಉಡುಪ ಧಾರ್ಮಿಕ ಸಂದೇಶ ನೀಡಿ, ಶ್ರೀ ಮಾರಿಯಮ್ಮನ ಪುರಾಣೋಕ್ತ ಸ್ವರೂಪಗಳನ್ನು ವಿವರಿಸಿದರು.

ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೆ. ಸುಕೇಶ್ ಶೇಟ್ ಸಂಘದ ಕಾರ್ಯಯೋಜನೆಗಳನ್ನು ವಿವರಿಸಿದರು.

ಸ್ಥಳೀಯ ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕ ಡಾ. ಎನ್. ಭಾಸ್ಕರ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು.

ದೇವಳ ಆಡಳಿತ ಸಮಿತಿ ಸದಸ್ಯರಾದ ಕೆ. ರಂಗನಾಥ ವಿ. ಭಟ್, ಶಿಲ್ಪಿ ರಾಜಗೋಪಾಲ ಆಚಾರ್ಯ, ಬುದ್ಧರಾಜ ಶೆಟ್ಟಿ, ಗೋಪಾಲ ಕೆ. ಆರ್., ಸುರೇಶ್ ವಿ. ಸೇರಿಗಾರ್, ಪ್ರೇಮಾ ಎಸ್. ನಾಯ್ಕ್, ರೇಣುಕಾ, ಅರ್ಚಕರಾದ ಪಾಂಡುರಂಗ ಜೋಗಿ ಮತ್ತು ಸುರೇಶ್ ಜೋಗಿ ಉಪಸ್ಥಿತರಿದ್ದರು. ಅರ್ಚಕ ವೃಂದದವರು, ಸಿಬಂದಿಗಳು, ಸುಬ್ಬಣ್ಣ ಶೆಟ್ಟಿ ಮಾರ್ಕೋಡು, ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರ್, ದಾನಿಗಳು ಇದ್ದರು.

ಶೇಖರ ಜೋಗಿ ಸ್ವಾಗತಿಸಿದರು. ಶ್ರೀಧರ ಬಾಳೆಗಾರ್ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ಜೋಗಿ ವಂದಿಸಿದರು.

20 ನೇ ವರ್ಷದ ಪುನರ್ ಪ್ರತಿಷ್ಠಾಪನಾಂಗವಾಗಿ ತಂತ್ರಿ ವೇದಮೂರ್ತಿ ಪ್ರಸನ್ನ ಕುಮಾರ ಐತಾಳರ
ನೇತೃತ್ವದಲ್ಲಿ ಶ್ರೀ ಮಾರಿಯಮ್ಮ ದೇವಿಗೆ ಮುಂಜಾನೆ ಕಲಾಭಿವೃದ್ಧಿ ಹೋಮ, ಅಷ್ಟೊತ್ತರ ಶತ ಕಲಶಾಭಿಷೇಕ, ನವಚಂಡಿ ಯಾಗ, ವಿಶೇಷ ಪೂಜಾದಿಗಳು ಮಧ್ಯಾನ್ಹ ಮಹಾ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ರಾತ್ರಿ ಕಲಾ ಚಂದನ, ಬೀಜಾಡಿ – ಗೋಪಾಡಿ ತಂಡದವರಿಂದ ಕುಂದಾಪ್ರ ಕನ್ನಡ ನಾಟಕ ನಡೆಯಿತು.