ಡೈಲಿ ವಾರ್ತೆ: 27/Feb/2024

ಸಕ್ಕರೆ ಕಾಯಿಲೆ ಇರೋರಿಗೆ ಬಾರ್ಲಿ ನೀರಿನ ಉಪಯೋಗ!

ಹೆಚ್ಚಿನ ಸಮಯದಿಂದ ಮಧುಮೇಹ ಹೊಂದಿರುವವರು ಬಾರ್ಲಿ ನೀರಿನ ಸೇವನೆ ಮಾಡಿ ತಮ್ಮ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡಿಕೊಳ್ಳಬಹುದು ಜೊತೆಗೆ ಈ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದು.

ಸಕ್ಕರೆ ಕಾಯಿಲೆಯ ನಿಯಂತ್ರಣದಲ್ಲಿ ಅನೇಕ ಬಗೆಯ ಆಹಾರ ಪದಾರ್ಥಗಳು ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತವೆ. ಅದರಲ್ಲಿ ಬಾರ್ಲಿ ಕೂಡ ಒಂದು. ಅನಾದಿಕಾಲ ದಿಂದಲೂ ಬಾರ್ಲಿ ಆಯುರ್ವೇದ ಪದ್ಧತಿಯಲ್ಲಿ ತನ್ನ ಪ್ರಖ್ಯಾತಿ ಉಳಿಸಿಕೊಂಡಿದೆ. ಹಲವಾರು ಕಾಯಿಲೆಗಳಿಗೆ ಇದು ರಾಮಬಾಣ. ಮಧುಮೇಹವನ್ನು ಸಹ ಬಾರ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತಹ ಸಾಮರ್ಥ್ಯ ಪಡೆದಿದೆ. ಇದರಿಂದ ನಮ್ಮ ದೇಹದ ಹಲವಾರು ಆರೋಗ್ಯ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ.
ಕಿಡ್ನಿ ಸಮಸ್ಯೆ, ಜೀರ್ಣಾಂಗ ವ್ಯವಸ್ಥೆಯ ತೊಂದರೆ, ಕೊಲೆಸ್ಟ್ರಾಲ್, ಹೃದಯದ ಸಮಸ್ಯೆ ಹೀಗೆ. ಬನ್ನಿ ಈ ಲೇಖನದಲ್ಲಿ ಬಾರ್ಲಿ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ಸಕ್ಕರೆ ಕಾಯಿಲೆ ಇರೋರಿಗೆ ಬಾರ್ಲಿ ನೀರಿನ ಉಪಯೋಗ!

ಇದರಲ್ಲಿ ನಾರಿನ ಅಂಶ ಹೆಚ್ಚಾಗಿದೆ
ಬಾರ್ಲಿ ನೀರು ತನ್ನಲ್ಲಿ ನಾರಿನ ಪ್ರಮಾಣವನ್ನು ಅಪಾರವಾಗಿ ಹೊಂದಿದೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಇದು ತುಂಬಾ ಸಹಾಯಕ. ಅವರು ಸೇವಿಸಿದ ಆಹಾರದಲ್ಲಿ ಕಂಡು ಬರುವ ಗ್ಲೂಕೋಸ್ ಪ್ರಮಾಣವನ್ನು ನಿಧಾನವಾಗಿ ಹೀರಿಕೊಳ್ಳುವಂತೆ ಮಾಡಿ ಬ್ಲಡ್ ಶುಗರ್ ಲೆವೆಲ್ ನಿರ್ವಹಣೆ ಮಾಡುತ್ತದೆ.

ಸಿಹಿ ಸೂಚ್ಯಂಕ ಕಡಿಮೆ ಇದೆ
ಬಾರ್ಲಿ ನೀರು ತನ್ನಲ್ಲಿ ಕಡಿಮೆ ಸಿಹಿ ಸೂಚ್ಯಂಕವನ್ನು ಹೊಂದಿದೆ. ಹೀಗಾಗಿ ಆಹಾರ ಸೇವನೆ ಮಾಡಿದ ತಕ್ಷಣ ಇದು ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೆ ಇದು ತುಂಬಾ ಒಳ್ಳೆಯದು.

ತೂಕ ನಿರ್ವಹಣೆ ಮಾಡುತ್ತದೆ
ಬಾರ್ಲಿ ನೀರು ತನ್ನಲ್ಲಿ ನಾರಿನ ಅಂಶವನ್ನು ಹೆಚ್ಚಾಗಿ ಒಳಗೊಂಡಿ ರುವುದರಿಂದ ತೂಕ ನಿರ್ವಹಣೆಯಲ್ಲಿ ಇದು ಹೆಚ್ಚು ಸಹಾಯ ಮಾಡುತ್ತದೆ. ಬಾರ್ಲಿ ನೀರು ಕುಡಿದ ತಕ್ಷಣ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಇದರಿಂದ ಹೆಚ್ಚುವರಿ ಆಹಾರವನ್ನು ಸೇವನೆ ಮಾಡಲು ಆಗುವುದಿಲ್ಲ.

ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗಿಸುತ್ತದೆ
ಕೆಲವೊಂದು ಸಂಶೋಧನೆಗಳು ಹೇಳುವಂತೆ ಬಾರ್ಲಿ ನೀರು ಸೇವನೆ ಮಾಡುವುದರಿಂದ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗುತ್ತದೆ. ಜೀವಕೋಶಗಳು ಗ್ಲುಕೋಸ್ ಪ್ರಮಾಣವನ್ನು ಅತ್ಯುತ್ತಮವಾಗಿ ಬಳಸಿಕೊಂಡು ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವಂತೆ ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣವಾಗುತ್ತದೆ
ಅಧಿಕ ನಾರಿನ ಅಂಶ ಇರುವ ಬಾರ್ಲಿ ನೀರು ಕುಡಿಯುವುದರಿಂದ ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಸಾಕಷ್ಟು ನಿಯಂತ್ರಣವಾಗುತ್ತದೆ. ಇದರಿಂದ ಹೃದಯದ ಸಮಸ್ಯೆಗಳು ತಪ್ಪುತ್ತವೆ. ಮುಖ್ಯವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಇದು ಅತ್ಯಂತ ಅವಶ್ಯಕ.

ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿವೆ
ಬಾರ್ಲಿ ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣವನ್ನು ಹೆಚ್ಚಾಗಿ ಹೊಂದಿದ್ದು, ವಿಟಮಿನ್ ಸಿ ಮತ್ತು ಸೆಲೆನಿಯಂ ಇದರಲ್ಲಿ ಸಾಕಷ್ಟಿದೆ. ಇದು ಜೀವಕೋಶಗಳನ್ನು ಫ್ರೀ ರಾಡಿಕಲ್ ಅಂಶಗಳಿಂದ ರಕ್ಷಣೆ ಮಾಡುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇದರ ಪಾತ್ರ ಬಹಳ ದೊಡ್ಡದು.

ಕಿಡ್ನಿಗಳ ಕಾರ್ಯ ಚಟುವಟಿಕೆ ಹೆಚ್ಚಿಸುತ್ತದೆ:
ಕಿಡ್ನಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಬಾರ್ಲಿ ನೀರು ತುಂಬಾ ಪ್ರಯೋಜನಕಾರಿ. ಸಕ್ಕರೆ ಕಾಯಿಲೆಯಿಂದ ಬಂದಿರುವ ಕಿಡ್ನಿ ಸಮಸ್ಯೆಯನ್ನು ಮೂತ್ರ ವಿಸರ್ಜನೆ ಹೆಚ್ಚಿಸುವ ಮೂಲಕ ಇದು ಬಗೆಹರಿಸುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಬಾರ್ಲಿ ನೀರು ಸೇವನೆ ಮಾಡುವುದರಿಂದ ಕಿಡ್ನಿಗಳ ಇಂತಹ ಅನೇಕ ಸಮಸ್ಯೆಗಳಿಂದ ಪಾರಾಗಬಹುದು.

ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು
ನಿಮ್ಮ ಅಜೀರ್ಣತೆ, ಮಲಬದ್ಧತೆ ಮತ್ತು ಇನ್ನಿತರ ಕರುಳು ಸಂಬಂಧಿತ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡುವಲ್ಲಿ ಬಾರ್ಲಿ ನೀರು ಕೆಲಸ ಮಾಡುತ್ತದೆ. ನಿಮ್ಮ ಕರುಳಿನ ಕಾರ್ಯ ಚಟುವಟಿಕೆಯನ್ನು ವೃದ್ಧಿ ಸುವ ಮೂಲಕ ಇದು ಅತ್ಯುತ್ತಮವಾಗಿ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುತ್ತದೆ.

ನಿರ್ಜಲೀಕರಣ ದೂರ ಮಾಡುತ್ತದೆ
ಉತ್ತಮ ಬಗೆಯ ಪೌಷ್ಟಿಕಾಂಶಗಳನ್ನು ನೀಡುವ ಜೊತೆಗೆ ಬಾರ್ಲಿ ನೀರು ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಇರುವುದಿಲ್ಲ ಎಂದು ಹೇಳುತ್ತಾರೆ. ಇದು ನಮ್ಮ ಸಂಪೂರ್ಣ ಆರೋಗ್ಯವನ್ನು ಯಾವುದೇ ಸಂದರ್ಭದಲ್ಲಿ ಕಾಪಾಡುವ ಸಾಮರ್ಥ್ಯ ಹೊಂದಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.