ಡೈಲಿ ವಾರ್ತೆ: 29/Feb/2024

ಬೆಂಗಳೂರು: ಮುಸ್ಲಿಮರಿಂದ ನಡು ರಸ್ತೆಯಲ್ಲಿ ನಮಾಜ್ – ಹಿಂದೂಪರ ಹೋರಾಟಗಾರನಿಂದ ದೂರು ದಾಖಲು!

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ವಾರ್ಡ್ನಲ್ಲಿರುವ ಅತೀಕ್ ಮಸೀದಿ ಬಳಿ ಮುಸ್ಲಿಮರು ನಡು ರಸ್ತೆಯಲ್ಲಿ ನಮಾಜ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅನುಮತಿ ಪಡೆಯದೆ ರಸ್ತೆಯಲ್ಲಿ ನಮಾಜ್ ಮಾಡಲಾಗಿದೆ ಎಂದು ಆರೋಪಿಸಿ ಮಸ್ಜಿದ್ ಮುಖ್ಯಸ್ಥರ ವಿರುದ್ಧ ಹಿಂದೂಪರ ಹೋರಾಟಗಾರ ತೇಜಸ್ ಗೌಡ ಎಂಬುವವರು ದೂರು ದಾಖಲಿಸಿದ್ದಾರೆ. ಸದ್ಯ ಮುಸ್ಲಿಮರು ರಸ್ತೆಯಲ್ಲಿ ಕೂತು ನಮಾಜ್ ಮಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಫೆಬ್ರವರಿ 25ರ ಭಾನುವಾರದಂದು ಅತೀಕ್ ಮಸೀದಿ ಬಳಿ ಮುಸ್ಲಿಮರು ರಸ್ತೆಯಲ್ಲೇ ಕೂತು ಪ್ರಾರ್ಥನೆ ಸಲ್ಲಿಸಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಸ್ಟೇಷನ್ ಪೋಲಿಸರು ಎನ್ಸಿಆರ್ ದಾಖಲಿಸಿದ್ದಾರೆ. ಸೋಮೇಶ್ವರ ನಗರ ಮುಖ್ಯರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆಗಳಾದ ನಿಮ್ಹಾನ್ಸ್, ಕಿದ್ವಾಯಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಆಸ್ಪತ್ರೆಗಳಿವೆ. ಈ ರಸ್ತೆಯಲ್ಲಿ ಆಂಬ್ಯುಲೆನ್ಸ್ ಸಂಚರಿಸುತ್ತವೆ. ರಸ್ತೆಯಲ್ಲಿ ನಮಾಜ್ ಮಾಡಿದರಿಂದ ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಸಂಚಾರ ದಟ್ಟಣೆ ಉಂಟಾಗಿತ್ತು.
ಅನ್ಯ ಕೋಮಿನ ಭಾವನೆಗಳನ್ನು ಪ್ರಚೋದಿಸುವಂತೆ ಧಕ್ಕೆಯುಂಟಾಗುವಂತೆ ವರ್ತಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಈ ರೀತಿ ಪ್ರಾರ್ಥನೆ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ಆದ್ದರಿಂದ ಅತೀಕ್ ಮಸೀದಿ ಮುಖ್ಯಸ್ಥರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿ. ಈ ರೀತಿ ಮತ್ತೆ ಮರುಕಳಿಸದಂತೆ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಅವರಿಗೆ ತಿಳಿಸಿ ಕೊಡುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಹಿಂದೂಪರ ಹೋರಾಟಗಾರ ತೇಜಸ್ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.