ಡೈಲಿ ವಾರ್ತೆ: 02/Mar/2024

2008ರ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಎಲ್ಇಟಿಯ ಅಜಮ್ ಚೀಮಾ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾವು!

2008ರ ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ ಹಾಗೂ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಹಿರಿಯ ಕಮಾಂಡರ್ ಅಜಮ್ ಚೀಮಾ ಪಾಕಿಸ್ತಾನದ ಫೈಸಲಾಬಾದ್ ನಗರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.

2006ರಲ್ಲಿ ಮುಂಬೈನಲ್ಲಿ ನಡೆದ ರೈಲು ಬಾಂಬ್ ಸ್ಫೋಟದಲ್ಲಿ 188 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯ ಮಾಸ್ಟರ್ ಮೈಂಡ್ ಕೂಡ ಅಜಮ್ ಚೀಮಾ ಎಂದು ಹೇಳಲಾಗಿದೆ.

2008 ರ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ ಒಟ್ಟು 166 ಜನರ ಸಾವಿಗೆ ಕಾರಣವಾದ ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಅಜಮ್ ಚೀಮಾ ಯುಎಸ್ ಸರ್ಕಾರಕ್ಕೆ ಬೇಕಾಗಿದ್ದ ಎಂದು ಹೇಳಲಾಗಿದೆ. ಇನ್ನು ಸಾವನ್ನಪ್ಪಿರುವ ಅಜಮ್ ಚೀಮಾನ ಅಂತ್ಯಕ್ರಿಯೆಯನ್ನು ಫೈಸಲಾಬಾದ್‌ನ ಮಲ್ಖಾನ್‌ವಾಲಾದಲ್ಲಿ ನಡೆಸಲಾಗಿದೆ ಎಂದು ವರದಿ ಹೇಳಿದೆ.

ನವೆಂಬರ್ 26, 2008 ರಂದು, 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗದ ಮೂಲಕ ದಕ್ಷಿಣ ಮುಂಬೈ ಪ್ರದೇಶಗಳನ್ನು ಪ್ರವೇಶಿಸಿದರು ಹಾಗೂ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿದರು. ಈ ದಾಳಿಯಲ್ಲಿ 166 ಜನರು ಮತ್ತು 18 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು.

2010 ರಲ್ಲಿ, ಯುಎಸ್ ಹಣಕಾಸು ಇಲಾಖೆಯು ಎಲ್ಇಟಿಯ ಹಣಕಾಸು ಜಾಲಗಳನ್ನು ಗುರಿಯಾಗಿಟ್ಟುಕೊಂಡು ಚೀಮಾ ವಿರುದ್ಧ ಕ್ರಮ ಕೈಗೊಂಡಿತು. ಚೀಮಾ ಎಲ್‌ಇಟಿಯ ತರಬೇತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಹಾಗೂ ಬಾಂಬ್ ತಯಾರಿಕೆಗೆ ಯುವಕರಿಗೆ ತರಬೇತಿ ಮತ್ತು ಭಾರತದೊಳಗೆ ಹೋಗುವುದು ಹೇಗೆ ಎಂಬ ಅಗತ್ಯ ಕೌಶಲ್ಯಗಳನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ.