ಡೈಲಿ ವಾರ್ತೆ: 23/Mar/2024
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ: ಬಾಂಬ್ ಇರಿಸಿದ್ದ ಶಂಕಿತನ ಗುರುತು ಪತ್ತೆ ಮಾಡಿದ NIA
ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ’ ಬಾಂಬ್ ಸ್ಪೋಟ
ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಬಾಂಬ್ ಇರಿಸಿದ್ದ ಶಂಕಿತ ಹಾಗೂ ಆತನಿಗೆ ಸಹಾಯ ಮಾಡಿದ್ದ ಶಂಕಿತನ ಗುರುತು ಪತ್ತೆ ಮಾಡಿರುವುದಾಗಿ ತಿಳಿದು ಬಂದಿದೆ.
‘ಭಯೋತ್ಪಾದನಾ ಸಂಘಟನೆ ಜೊತೆ ಒಡನಾಟವಿಟ್ಟುಕೊಂಡು ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಎಂಬಾತನೇ ಬಾಂಬ್ ಇರಿಸಿರುವ ಅನುಮಾನ ದಟ್ಟವಾಗಿದೆ. ಆದರೆ, ಈತ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಬಹುಮಾನ ಸಹ ಘೋಷಿಸಲಾಗಿದೆ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.
‘ಮುಸಾವೀರ್‌ಗೆ ತೀರ್ಥಹಳ್ಳಿಯವನಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಸಹ ಸಹಕಾರ ನೀಡಿರುವ ಮಾಹಿತಿ ಲಭ್ಯವಾಗಿದೆ. ಇವರಿಬ್ಬರೂ ತಲೆಮರೆಸಿಕೊಂಡಿರುವುದರಿಂದ, ಅವರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿವೆ.
ಶಿವಮೊಗ್ಗದಲ್ಲಿ ಐಇಡಿ ತರಬೇತಿ:
‘ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಶಂಕಿತರು, ಕಚ್ಚಾ ಬಾಂಬ್ (ಐಇಡಿ) ತಯಾರಿಸುವುದು ಹೇಗೆ? ಎಂಬುದರ ತರಬೇತಿ ಪಡೆದಿದ್ದರು. ಶಿವಮೊಗ್ಗದ ಗುರುಪುರ-ಪುರಲೆ ಸಮೀಪದಲ್ಲಿರುವ ತುಂಗಾ ನದಿಯ ತೀರದಲ್ಲಿ ತಾವೇ ತಯಾರಿಸಿದ್ದ ಐಇಡಿ ಪರೀಕ್ಷಾರ್ಥ ಸ್ಫೋಟಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.
ಸದ್ಯ ಜೈಲಿನಲ್ಲಿರುವ ಮಾಝ್ ಮುನೀರ್ ಅಹ್ಮದ್ ಹಾಗೂ ಇತರರ ಜೊತೆಗೆಯೂ ಮುಸಾವೀರ್ ಒಡನಾಟವಿಟ್ಟುಕೊಂಡಿದ್ದ ಎಂದು ಮೂಲಗಳು ಹೇಳಿವೆ.