ಡೈಲಿ ವಾರ್ತೆ: ಮಾ./07/2026

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಬೆಂಕಿ – ಚಾಲಕನ ಜಾಗರೂಕತೆಯಿಂದ ತಪ್ಪಿದ ಭಾರಿ ಅನಾಹುತ

​ಶಿವಮೊಗ್ಗ: ನಗರದ ಆಲ್ಕೊಳ ವೃತ್ತದ ಬಳಿ ಚಲಿಸುತ್ತಿದ್ದ ಕಾರಿನ ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆ ಹಾಗೂ ಸ್ಥಳೀಯರ ಸಹಕಾರದಿಂದ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

​ ಗಾಡಿಕೊಪ್ಪ ಕಡೆಯಿಂದ ನಗರದ ಬಸ್ ನಿಲ್ದಾಣದ ಕಡೆಗೆ ಕಾರು ಚಲಿಸುತ್ತಿತ್ತು. ಆಲ್ಕೊಳ ವೃತ್ತದ ಸಮೀಪ ಬರುತ್ತಿದ್ದಂತೆಯೇ ಕಾರಿನ ಇಂಜಿನ್ ಭಾಗದಿಂದ ಏಕಾಏಕಿ ದಟ್ಟವಾದ ಹೊಗೆ ಹೊರಬರಲಾರಂಭಿಸಿದೆ. ತಕ್ಷಣ ಎಚ್ಚೆತ್ತ ಚಾಲಕ ಗಾಡಿಯನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ.

​ಬೆಂಕಿ ಕಾಣಿಸಿಕೊಂಡ ಸ್ಥಳದ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇತ್ತು. ಬೆಂಕಿ ಮತ್ತಷ್ಟು ವ್ಯಾಪಿಸುವ ಅಪಾಯವನ್ನರಿತ ಬಂಕ್ ಸಿಬ್ಬಂದಿ ಹಾಗೂ ಸ್ಥಳೀಯರು ಕೂಡಲೇ ಅಗ್ನಿಶಾಮಕ ಉಪಕರಣಗಳೊಂದಿಗೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಹಾಗೂ ಪೆಟ್ರೋಲ್ ಬಂಕ್ ಬಳಿಯೇ ಈ ಘಟನೆ ನಡೆದಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.