ಡೈಲಿ ವಾರ್ತೆ: 02/April/2024

ಬಂಡಾಯ ಇರುವ 4 ಲೋಕಸಭಾ ಕ್ಷೇತ್ರಗಳ ಬಿಜೆಪಿ ನಾಯಕರಿಗೆ ಗೆಲುವಿನ ಗುರಿ ಕೊಟ್ಟ ಅಮಿತ್ ಶಾ!

ಬೆಂಗಳೂರು:  ಲೋಕಸಭೆ ಚುನಾವಣೆ ಗೆಲ್ಲುವುದಕ್ಕಾಗಿ ರಣತಂತ್ರ ರೂಪಿಸಲು ಬೆಂಗಳೂರಿಗೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಖಾಸಗಿ ಹೋಟೆಲ್ನಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಜತೆ ಸಭೆ ನಡೆಸಿದರು. ಇದೇ ವೇಳೆ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅವರು ಒಂದಷ್ಟು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಬಂಡಾಯ ಇರುವ ಕ್ಷೇತ್ರ ನಾಯಕರ ಜೊತೆಗೂ ಅಮಿತ್ ಶಾ ಸಭೆ ಮಾಡಿದ್ದು, ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಬಂಡಾಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಇದ್ದ ಬಂಡಾಯವನ್ನು ಅಮಿತ್ ಶಾ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೆಲುವಿನ ಗುರಿ ನೀಡಿದ ಶಾ
ದಾವಣಗೆರೆ,  ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಒಟ್ಟು  4 ಕ್ಷೇತ್ರಗಳ ಕೋರ್ ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಸಭೆ ಮಾಡಿದ್ದು, ಈ ವೇಳೆ ಬಂಡಾಯ ಎದ್ದಿರುವ ನಾಯಕರುಗಳಿಗೆ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ 4 ಕ್ಷೇತ್ರಗಳಲ್ಲೂ 2 ಲಕ್ಷ ಮತಗಳ ಅಂತರದ ಗೆಲ್ಲಬೇಕು ಎಂದು ನಾಯಕರುಗಳಿಗೆ ಶಾ ಗೆಲುವಿನ ಗುರಿ ನೀಡಿದ್ದಾರೆ.
ಇನ್ನು ಈ ನಾಲ್ಕು ಕ್ಷೇತ್ರಗಳ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆದಿದೆ. ಕ್ಷೇತ್ರದ ಮುಖಂಡರಿಂದ ಸಹಕಾರ ಇಲ್ಲದಿರುವ ಬಗ್ಗೆ ದಾವನಗೆರೆ ಸಂಸದ ಸಿದ್ದೇಶ್ವರ್, ಅಮಿತ್ ಶಾ ಮುಂದೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಇತರ ಮುಖಂಡರು ಆಕ್ಷೇಪಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಅಮಿತ್ ಶಾ, ನಾಯಕರ ಪರಿಸ್ಥಿತಿ ತಿಳಿಗೊಳಿಸಿ ಕೆಲ ಖಡಕ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ.