ಡೈಲಿ ವಾರ್ತೆ: 02/April/2024

ಮಂಡ್ಯ ಲೋಕಸಭಾ ಕ್ಷೇತ್ರ: ಮುಂದಿನ ನಿರ್ಧಾರ ಪ್ರಕಟಿಸಲು ಮುಹೂರ್ತ ನಿಗದಿ ಮಾಡಿದ ಸುಮಲತಾ.!

ಬೆಂಗಳೂರು: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು ಟಿಕೆಟ್‌ ಕೈತಪ್ಪಿದ ಬಳಿಕ ಹಲವು ಸಭೆ ನಡೆಸಿರುವ ಸಂಸದೆ ಸುಮಲತಾ ಅವರು ಇದೀಗ ತಮ್ಮ ಅಂತಿಮ ತೀರ್ಮಾನ ಪ್ರಕಟಿಸಲು ಮುಹೂರ್ತ ನಿಗದಿ ಮಾಡಿದ್ದಾರೆ.

ಏಪ್ರಿಲ್ 3ರ ಬೆಳಗ್ಗೆ 10 ಗಂಟೆಗೆ ಕಾಳಿಕಾಂಬಾ ದೇವಸ್ಥಾನದ ಆವರಣದಲ್ಲಿ ತನ್ನ ಮುಂದಿನ ನಿಲುವಿನ ಬಗ್ಗೆ ಪ್ರಕಟಿಸಲಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ.

ಟಿಕೆಟ್ ಕೈತಪ್ಪುವುದು ಖಚಿತವಾದ ಬಳಿಕ ಸುಮಲತಾ ಅವರು ಬೆಂಬಲಿಗರ ಸಭೆ ನಡೆಸಿದ್ದರು. ಅಲ್ಲದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೂ ಚರ್ಚೆ ನಡೆಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬುಧವಾರ ತನ್ನ ನಿರ್ಧಾರ ಪ್ರಕಟಿಸುವುದಾಗಿ ಹೇಳಿಕೊಂಡಿದ್ದಾರೆ.