ಡೈಲಿ ವಾರ್ತೆ: 17/April/2024

ಸತ್ಯದ ಬೀದಿಯಲ್ಲಿ ಮುಚ್ಚುತ್ತಿವೆ ಸುಳ್ಳಿನ ಅಂಗಡಿಗಳು!

ಆ ಊರಿನ ಜನ ಬದಲಾವಣೆ ಬಯಸುತ್ತಿದ್ದಾರೆ.  ಸುಳ್ಳನಿಗೆ ದೊರೆತನ ನೀಡಿದರೆ ಏನಾಗುತ್ತದೆ ಎಂಬುದರ ಅರಿವು ಜನರಿಗಾಗಿದೆ.  ಇಷ್ಟು ದಿನ ಸತ್ಯದ ಬಟ್ಟೆ ತೊಟ್ಟು ತಿರುಗಾಡುತ್ತಿದ್ದ ಸುಳ್ಳು ಕೊನೆಗೂ ಜನರ ಕಣ್ಣಿಗೆ ಬಿದ್ದಿದೆ. ಶ್ರಮದ ಹಾದಿ ಮರೆತು, ಸುಳ್ಳಿನ ಕತೆಗಳನ್ನು ಪೋಣಿಸಿ ಬಲ್ಲಿದನೆಂದೆನಿಸಿಕೊಂಡವರ ಬದುಕು ಬಯಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಕಾವಿನ ಕೇಂದ್ರ ಬಿಂದುವಾಗಿರುವ ಆ ಊರಿನ ಬೀದಿಗಳಲ್ಲಿ ಸಾಗಿದಾಗ ಈ ಅನುಭವ ಆಗಿಯೇ ಆಗುತ್ತದೆ.


ಆ ಭಾಗದ ಜನರು ಬುದ್ಧಿವಂತರು ಎಂದು ಬೇರೆ ಊರಿನ ಜನರು ಹೇಳುತ್ತಾರೆ. ಅದನ್ನು ಒಪ್ಪಿಕೊಳ್ಳಲೇಬೇಕು. ಇದು ಅಲ್ಲಿನ ಶಿಕ್ಷಣದ ಯಶಸ್ಸಿನಿಂದ, ಎಲ್ಲಿ ಹೋದರೂ ಹೊಂದಿಕೊಂಡು ದುಡಿದು ಬದುಕುವ ಗುಣದಿಂದಾಗಿ ಬಂದಿರಬಹುದು, ರಾಜಕೀಯದ ವಿಷಯ ಬಂದಾಗ ಆ ಊರಿನ ಜನ ಬುದ್ಧಿವಂತರೇ? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಬುದ್ಧಿವಂತಿಕೆಯಲ್ಲಿ ರಾಜಕೀಯ ಮಾಡಲು ಹೋದರೆ ತಪ್ಪಿನ ಹಾದಿ ಹಿಡಿಯಬೇಕಾಗುತ್ತದೆ. ಆ ಊರು ನಂಬಿಕೆಗಳ ತವರೂರು. ಇಲ್ಲಿ ಜನ ಎಲ್ಲವನ್ನೂ ಸ್ವೀಕರಿಸುತ್ತಾರೆ. ಬಳಿಕ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತೀರ್ಮಾನಿಸಿ ಅಂತಿಮ ಆಯ್ಕೆ ಮಾಡುತ್ತಾರೆ. ಆದರೆ ಅಲೆಯಲ್ಲಿ ಸಿಲುಕಿದಾಗ ಆಯ್ಕೆಗೆ ಅವಕಾಶ ಕಡಿಮೆ. ಈ ಜನರ ನಂಬಿಕೆಗಳನ್ನೇ ದೌರ್ಬಲ್ಯವೆಂದು ತಿಳಿದು ರಾಜಕೀಯ ಪಕ್ಷಗಳು ದೇವರ ಹೆಸರಿನಲ್ಲಿ ಮತ ಯಾಚಿಸಿ ಯಶಸ್ಸು ಕಂಡವು. ಅಲೆಗಳಲ್ಲಿ ತೇಲಿ ಬಂದ ಕಸವನ್ನೂ ಪ್ರಸಾದವೆಂದು ಇಲ್ಲಿಯ ಜನ ಸ್ವೀಕರಿಸಿದರು. ಉಟ್ಟ ಉಡುಗೆ, ತಿನ್ನುವ ಆಹಾರ, ಹರಿವ ನೀರು, ನಡೆಯುವ ಹಾದಿ, ಕಲಿಸುವ ಶಾಲೆ, ನಡೆಯುವ ಜಾತ್ರೆ, ನುಡಿಯುವ ಮಾತು, ಉರಿವ ಬೆಂಕಿ ಎಲ್ಲದರಲ್ಲೂ ವಿವಾದ ಹುಟ್ಟಿಕೊಂಡಿತು. ಕೊನೆಗೆ ಉಳಿದದ್ದು ನೈಸರ್ಗಿಕವಾದ ಗಾಳಿ, ಬೆಳಕು ಮತ್ತು ಮಳೆಯಲ್ಲಿ ವಿವಾದ ಸಿಗಲಿಲ್ಲ. ಈ ವಿವಾದಗಳ ನಡುವೆ ಬೀಡಿ ಹಚ್ಚಿಕೊಂಡು ಸೇದಿದವರು ರಾಜಕೀಯವಾಗಿ ಬೆಳೆದರು. ವಿವಾದಗಳ ನಡುವೆ ವಿಶೇಷ ಎನಿಸಿಕೊಂಡವರು ಜನನಾಯಕರಾದರು. ದೇವರಲ್ಲಿ, ದೇವಾಲಯಗಳಲ್ಲಿ, ಮಠ ಮಂದಿರಗಳಲ್ಲಿ, ಮಸೀದಿ-ಚರ್ಚ್‌ಗಳಲ್ಲಿ ಮತ್ತು ಗುರು ಹಿರಿಯರಲ್ಲಿ ತೋರಬೇಕಾದ ಭಕ್ತಿ ರಾಜಕಾರಣಿಗಳ ಸಭೆಗಳಲ್ಲಿ ಕಾಣಿಸಿಕೊಂಡಿತು. ಜನರು ಭಕ್ತಿಯ ಅಲೆಯಲ್ಲಿ ತೇಲಿದರು. ಮತ್ತು ಅನುಭವಿಸಿದರು.
ಈಗ ಆ ಊರಿನಲ್ಲಿ ಸುನಾಮಿ ಅಲೆ ನಿಂತಿದೆ. ಅಲೆಯಲ್ಲಿ ಸ್ವೀಕರಿಸಿದ್ದ ವಸ್ತುಗಳಲ್ಲಿ ಉಪಯುಕ್ತ ಯಾವುದು? ನಿರುಪಯುಕ್ತ ಯಾವುದು ಎಂಬುದನ್ನು ಜನ ಲೆಕ್ಕ ಹಾಕುತ್ತಿದ್ದಾರೆ. ಕೆಲವರು ಅಲೆಯಲ್ಲಿ ತಾವು ಆಯ್ಕೆ ಮಾಡಿದ್ದು ಕಸ ಎಂಬುದು ಅರಿವಾಗಿ ಯಾರಿಗೂ ತಿಳಿಯದಂತೆ ಎಸೆಯುತ್ತಿದ್ದರೆ, ಇನ್ನು ಕೆಲವರು ಗೊಬ್ಬರಕ್ಕಾದರೂ ಆಗಬಹುದು ಎಂದು ಯೋಚಿಸುತ್ತಿದ್ದಾರೆ. ಮತ್ತೆ ಕೆಲವರು ಒಂದೇ ಜಾತಿಯ ಕಸವನ್ನು ಆಯ್ಕೆ ಮಾಡಿ ತಪ್ಪು ಮಾಡಿದೆವು ಎಂಬ ನೋವಿನಲ್ಲಿದ್ದಾರೆ. ಅದು ವಾತಾವರಣವನ್ನು ಹಾನಿ ಮಾಡುವ ಹಾನಿಕಾರಕ ಕಸ ಎಂಬ ಅರಿವೂ ಅವರಿಗಾಗಿದೆ.


ಈಗ ಕಸವನ್ನೆಲ್ಲ ಬದಿಗೊತ್ತಿ ಬೀದಿ ಬೀದಿಗಳಲ್ಲಿ ರಂಗೋಲಿ ಹಾಕುತ್ತಿದ್ದಾರೆ. ಹೊಸತನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. ತಾವು ಮಾಡಿದ ತಪ್ಪನ್ನು ಯಾರಲ್ಲೂ ಹೇಳಿಕೊಳ್ಳದಿದ್ದರೂ ತಮ್ಮ ತಪ್ಪಿನ ಅರಿವನ್ನು ತಮ್ಮ ಕಾರ್ಯಗಳ ಮೂಲಕ ಪ್ರತಿಬಿಂಬಿಸುತ್ತಿದ್ದಾರೆ.
ಸುಳ್ಳಿನ ವ್ಯಾಪಾರಕ್ಕಾಗಿ ತೆರೆದ ಅಂಗಡಿಗಳು ಒಂದೊಂದಾಗಿ ಮುಚ್ಚುತ್ತಿವೆ. ಅಲ್ಲಿ ಸತ್ಯದ ಅಂಗಡಿಗಳು ತೆರೆದುಕೊಳ್ಳುತ್ತಿವೆ. ಸತ್ಯದ ಬಟ್ಟೆಯನ್ನು ಧರಿಸಿ ತಿರುಗುತ್ತಿದ್ದ ಸುಳ್ಳನ್ನು ಹಿಡಿದು ನಿಯಂತ್ರಿಸಲು ಜನ ಕಾಯುತ್ತಿದ್ದಾರೆ, ನಾಚಿಕೆಯಿಂದ ಅಲ್ಲಿಲ್ಲಿ ಅವಿತು ತಿರುಗುತ್ತಿದ್ದ ಸತ್ಯವನ್ನು ಗುರುತಿಸಿ ಅಪ್ಪಿಕೊಳ್ಳುತ್ತಿದ್ದಾರೆ. ತಮ್ಮ ಮನೆಗೆ ಕರೆದು ಸ್ವಾಗತಿಸುತ್ತಿದ್ದಾರೆ. ಕಾಲ ಮತ್ತು ಅಲೆ ಯಾರಿಗಾಗಿಯೂ ಕಾಯುವುದಿಲ್ಲ. ಕಾಲಕ್ಕೆ ತಕ್ಕಂತೆ ನಡೆದರೂ ಕೆಲ ಕಾಲ ಬದುಕಬಹುದು, ಆದರೆ ಈ ಅಲೆಗೆ ಸಿಕ್ಕವರು ಕಸದಂತೆ. ಒಂದೇ ದಡಕ್ಕೆ ಅಪ್ಪಳಿಸಿ ಬಯಲಾಗುತ್ತಾರೆ, ಇಲ್ಲ ಅಲೆಗೆ ಸಿಲುಕಿ ಮರೆಯಾಗುತ್ತಾರೆ. ಆ ಕಾಲ ಕಳೆದುಹೋಯಿತೆಂದು ಕಣ್ಣ ಮುಚ್ಚಿ ಮಲಗಿದರೂ ಮತ್ತೆ ಬೆಳಗಾಗಿ ಕಾಲ ನಮ್ಮ ಮುಂದೆ ಬಂದು ನಿಂತಿರುತ್ತದೆ. ಈ ನಡುವೆ ಅರಿವಿನ ಬೆಳಕು ಕೂಡ ಬಂದು ಹೋಗುತ್ತಿರುತ್ತದೆ, ಎಚ್ಚೆತ್ತುಕೊಂಡವನಿಗೆ ಬೆಳಗು. ಮಲಗಿದವನಿಗೆ ಕತ್ತಲೆ.
ಮಲಗಿದ್ದರೆ ಹಗಲಿನಲ್ಲೂ ಕತ್ತಲು ಎಂಬ ಅರಿವು ಆ ಊರಿನ ಜರಿಗೆ ಗೊತ್ತಾಗಿದೆ. ಸುಳ್ಳಿನ ಅಂಗಡಿಯಲ್ಲಿ ಈಗ ಗಿರಾಕಿಗಳೇ ಇಲ್ಲದೆ ಮುಚ್ಚುವಂತಾಗಿದೆ. ಈ ವೇಷದಲ್ಲಿ ಸಾಗಿದರೆ ಹೆಚ್ಚು ದಿನ ಕಳೆಯಲು ಅಸಾಧ್ಯ ಎಂಬುದು ಆ ಊರಿನ ಕಪಟಿಗಳಿಗೆ ಅರಿವಾಗಿದೆ. ಅಲೆಗೆ ಬೆನ್ನು ಕೊಟ್ಟು ಹೆದರುತ್ತಿದ್ದ ಊರಿನ ಜನ ಈಗ ಎದೆಗೊಟ್ಟು ನಿಲ್ಲಲು ಸಜ್ಜಾಗಿದ್ದಾರೆ. ಒಂದೆಡೆ ಗಾಳಿಯೂ ನಿಂತಿದೆ, ಕಡಲೂ ಶಾಂತವಾಗಿದೆ. ಏನೇನೋ ಆಸೆ ತೋರಿಸಿ ಸುಳ್ಳಿನ ಅಲೆಗೆ ಸಿಲುಕುವಂತೆ ಮಾಡಿದ ಊರಿನ ಯಜಮಾನನ್ನೇ ಕಿತ್ತೊಗೆಯಲು ಜನ ಸಜ್ಜಾಗಿದ್ದಾರೆ.
ಊರು ಯಾವುದೇ ಇರಲಿ… ಅಲೆ ಎಲ್ಲಿಂದಲೋ ಬರಲಿ.,, ಜನ ಎದುರಿಸಲು ಸನ್ನದ್ದರಾಗಿದ್ದಾರೆ.