ಡೈಲಿ ವಾರ್ತೆ: 17/April/2024

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೋಟೇಶ್ವರದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಚುನಾವಣೆ ಪ್ರಚಾರ-ಕೇಂದ್ರದಲ್ಲಿ 10 ವರ್ಷದಿಂದ ಬಿಜೆಪಿ ಸರಕಾರವಿದ್ದು ಕುಂದಾಪುರಕ್ಕೆ ನೀಡಿದ ಕೊಡುಗೆ ಶೂನ್ಯ-ಸುಧೀರ್ ಕುಮಾರ್ ಮುರೊಳ್ಳಿ

ಕುಂದಾಪುರ: ಕೇಂದ್ರದಲ್ಲಿ 10 ವರ್ಷದಿಂದ ಬಿಜೆಪಿ ಸರಕಾರವಿದ್ದು ಕುಂದಾಪುರಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು. ಅವರು ಬುಧವಾರ ಸಂಜೆ ಕೋಟೇಶ್ವರ ಪೇಟೆಯಲ್ಲಿ ನಡೆದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು 10 ತಿಂಗಳ ಕಾಂಗ್ರೆಸ್ ಆಳ್ವಿಕೆ, ಹತ್ತು ವರ್ಷಗಳ ಬಿಜೆಪಿ ಆಳ್ವಿಕೆ ಇವೆರಡು ತುಲನೆ ಮಾಡಿದಾಗ ಬಿಜೆಪಿ ಕೊಟ್ಟಿದ್ದು ಶೂನ್ಯ. ಅದಕ್ಕಾಗಿ ಶೋಭಕ್ಕಾ ಅವರನ್ನು ಬಿಜೆಪಿಯವರೇ ಗೋ ಬ್ಯಾಕ್ ಮಾಡಿದ್ದಾರೆ.
ಬಿಜೆಪಿ ಸರಕಾರವು ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡೋಕೆ ಬಡವರಿಂದ ಒಂದು ಸಾವಿರ ರೂ.ಲಂಚ ಪಡೆದ ಜನದ್ರೋಹಿ ಸರಕಾರ ಅನ್ನಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಓರ್ವ ಕೆಲಸ ಮಾಡುವ ಜನಪ್ರತಿನಿಧಿ. ಸಂಸಧೀಯ ಪಟು ಎಂದು ಕರೆಸಿಕೊಂಡವರು.‌ ಆದರೆ ಉಡುಪಿಯ ಶಾಸಕರು ಕುಸ್ತಿ ಪಟುವಂತೆ ವರ್ತನೆ ಮಾಡುತ್ತಾರೆ. ಇದು ಸತ್ಯ-ಅಸತ್ಯ, ಸಂವಿಧಾನ-ಸಂವಿಧಾನ ವಿರೋಧಿಗಳು, ಪ್ರಾಮಾಣಿಕರು-ಅಪ್ರಾಮಾಣಿಕರ ನಡುವಿನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಈ ಸಂದರ್ಭ ವಾಗ್ಮಿ ನಿಕೇತ್ ರಾಜ್ ಮೌರ್ಯ ಮಾತನಾಡಿ ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತ ಮಾಡಿದ ಬಿಜೆಪಿ ಸರಕಾರವು ಹಿಜಾಬ್, ಹಲಾಲ್, ಅಜಾನ್, ಮಂದಿರ-ಮಸೀದಿ ಮೊದಲಾದ ಚರ್ಚೆಗಳು, ವಿವಾದಗಳನ್ನು ಹುಟ್ಟುಹಾಕಿ ಜನರನ್ನು ದಾರಿ ತಪ್ಪಿಸಿದ್ದು ಕಳೆದ  ತಿಂಗಳ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಶಿಕ್ಷಣ, ಉದ್ಯೋಗ, ವಸತಿ, ರಸ್ತೆ-ಸೇತುವೆ ಮೊದಲಾದ ಅಭಿವೃದ್ಧಿ ಹಾಗೂ ಪ್ರಗತಿ ಬಗ್ಗೆ ಕಾಳಜಿ ವಹಿಸಿದೆ ಎಂದು ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು.
ತಾನು ಮೂರೂವರೆ ಕೋಟಿ ಮನೆಯಲ್ಲಿದ್ದುಕೊಂಡು ತಾಯಿ ಹಳ್ಳಿ ಮನೆಯಲ್ಲಿದ್ದಂತೆ ಫೋಟೋ ತೆಗೆದು ಪ್ರಚಾರ ಗಿಟ್ಟಿಸುವ ಕೆಲವು ರಾಜಕಾರಣಿಗಳೆದುರು ಸುಶಿಕ್ಷಿತರಾಗಿ, ತತ್ವದ ಮೇಲೆ ನಿಂತಿರುವ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರಿಗೆ ನಾಟಕೀಯತೆ ತಿಳಿದಿಲ್ಲ. ತಮ್ಮ ವ್ಯಕ್ತಿತ್ವದ ಮೂಲಕವೇ ಜಾತ್ಯಾತೀತವಾಗಿ ಗುರುತಿಸಿಕೊಂಡವರು. ಎಲ್ಲ ಧರ್ಮದವರು ಒಟ್ಟಿಗೆ ಸಮಾನತೆಯಿಂದ ಇರಬೇಕೆಂಬುದು ಕಾಂಗ್ರೆಸ್ ಪ್ರತಿಪಾದನೆಯಾಗಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಭಾವನಾತ್ಮಕ ವಿಚಾರಗಳ ಮೂಲಕ ನಮ್ಮನಮ್ಮಲ್ಲೇ ಒಡಕು ಮೂಡಿಸಿ ರಾಜಕೀಯ ಲಾಭ ಪಡೆಯುವ ಬಿಜೆಪಿ ಅಜೇಂಡಾ ಬದಿಗಿಟ್ಟು ಬದುಕು ಕಟ್ಟಿಕೊಡುವ ಕಾಂಗ್ರೆಸ್ ಪಕ್ಷಕ್ಕೆ ಪ್ರಜ್ಞಾವಂತ ಮತದಾರರು ಮತ ಕೊಡಬೇಕಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಮಾತನಾಡಿ, “
ಸರಕಾರಿ ಕಚೇರಿಯಲ್ಲಿ ಕೆಲಸ ಆಗುತ್ತೋ-ಇಲ್ಲವೋ ಎಂಬುದನ್ನು ಜನಪ್ರತಿನಿಧಿಗಳು ಗಮನವಹಿಸದಿದ್ದಲ್ಲಿ ಸಮಸ್ಯೆಯು ಸಮಸ್ಯೆಯಾಗಿಯೇ ಉಳಿಯುತ್ತದೆ. ಆರಿಸಿ ಬರುವ ಜನಪ್ರತಿನಿಧಿಗಳು ಜನರಿಗೆ ಮಾಡುವುದು ಸೇವೆಯಲ್ಲ, ಬದಲಾಗಿ ಅದು ನಮ್ಮ ಕರ್ತವ್ಯ ಎಂದರು. ನಾನು ಕೆಲಸ ಮಾಡಿ ಮತ ಕೇಳಲು ಬರುತ್ತೇನೆ. ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ ಕುರಿತು ಮಾತನಾಡಬೇಕು ಹೊರತು ವೈಯಕ್ತಿಕ ಠೀಕೆಗಳಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿದರು‌.
ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ ಗಫೂರ್, ಕೆಪಿಸಿಸಿ ಸದಸ್ಯ ನವೀನಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುಂದಾಪುರ ಕ್ಷೇತ್ರ ಚುನಾವಣಾ ಉಸ್ತುವಾರಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಅಶೋಕ್ ಪೂಜಾರಿ ಬೀಜಾಡಿ, ಕೆದೂರು ಸದಾನಂದ ಶೆಟ್ಟಿ, ಸತೀಶ್ ಕಿಣಿ ಬೆಳ್ವೆ, ಇಚ್ಚಿತಾರ್ಥ ಶೆಟ್ಟಿ, ಸುರೇಂದ್ರ ಶೆಟ್ಟಿ, ದೇವಕಿ ಸಣ್ಣಯ್ಯ, ವಿನೋದ್ ಕ್ರಾಸ್ತಾ, ಗಣೇಶ್ ಶೇರಿಗಾರ್ ಟಿ.ಟಿ ರೋಡ್, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ದೇವಾನಂದ ಶೆಟ್ಟಿ ಮೊದಲಾದವರಿದ್ದರು.