ಡೈಲಿ ವಾರ್ತೆ: 01/ಮೇ /2024

ವರದಿ: ವಿದ್ಯಾಧರ ಮೊರಬಾ

ಅಂಕೋಲಾ: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ- ಸಹ ಸವಾರ ಮೃತ್ಯು, ಸವಾರ ಗಂಭೀರ!

ಅಂಕೋಲಾ :  ಕಾರವಾರದಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದ  ವೇಳೆ  ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸಹ ಸವಾರ ಮೃತಪಟ್ಟು ಸವಾರ ಗಂಭೀರ ಗಾಯಗೊಂಡು ಘಟನೆ ಅವಾರ್ಸದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತಪಟ್ಟ ಸಹ ಸವಾರ ಹೊನ್ನಾವರ ತಾಲೂಕಿನ ಬೆಳ್ಳಿಮಕ್ಕಿ ಕೋಡಾಣ  ನಿವಾಸಿ ಪ್ರತಾಪ ಆಂಥೋನಿ ಲೋಬೋ (30) ಎಂದು ಗುರುತಿಸಲಾಗಿದೆ.

ಇವರು ಕಾರವಾರದಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಅಂಬುಲೆನ್ಸ್‍ನ ಮೆಡಿಕಲ್ ಇನ್‍ಚಾರ್ಜ ಪ್ರಶಾಂತ ದುರ್ಗೇಕರ್, ಸಹಾಯಕ ಶ್ರೀಕಾಂತ ನಾಯ್ಕ, ಚಾಲಕ ಚಂದ್ರಹಾಸ ನಾಯ್ಕ ಇವರು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಪ್ರತಾಪ ಲೋಬೋ ಮತ್ತು ಜೇಮ್ಸ್ ಲೋಬೋ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯೇ ಪ್ರತಾಪ ಲೋಬೋ ಮೃತಪಟ್ಟಿದ್ದ ಎನ್ನಲಾಗಿದೆ. ಜೇಮ್ಸ್ ಲೋಬೋ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರಕ್ಕಾಗಿ ಕಾರವಾರ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. 
ಈ ಕುರಿತು ಹೊನ್ನಾವರ ಬೆಳ್ಳಿಮಕ್ಕಿ, ಕೋಡಾಣ  ನಿವಾಸಿ ದೀಪಕ ಸಲ್ಮಾವ್ ಲೋಬೋ ಪೊಲೀಸ್ ದೂರು ಸಲ್ಲಿಸಿದ್ದಾರೆ. ಪಿಐ ಶ್ರೀಕಾಂತ ತೋಟಗಿ ಅವರ ಮಾರ್ಗದರ್ಶನದಲ್ಲಿ ಸಂಚಾರಿ ಪಿಎಸ್‍ಐ ಸುನಿಲ್ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಬೈಕ್ ಸವಾರ ಜೇಮ್ಸ್ ಲೋಬೋ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.