ಡೈಲಿ ವಾರ್ತೆ: 01/ಮೇ /2024
ಮೇ ದಿನಾಚರಣೆ 2024- ಎಐಟಿಯುಸಿ ಆತಂಕ: ಬಿಜೆಪಿ ಮಗದೊಮ್ಮೆ ಅಧಿಕಾರಕ್ಕೆ ಬಂದರೆ ಕಾರ್ಮಿಕ ಕಾನೂನುಗಳು ಸರ್ವನಾಶ!
ಬಂಟ್ವಾಳ : ಮೋದಿ ನೇತೃತ್ವದ
ಎನ್.ಡಿ.ಎ ಮೈತ್ರಿಕೂಟ ಮಗದೊಮ್ಮೆ ಅಧಿಕಾರಕ್ಕೆ ಬಂದರೆ ನೂರಾರು ವರ್ಷಗಳ ತ್ಯಾಗ ಬಲಿದಾನಗಳ ಐತಿಹಾಸಿಕ ಹೋರಾಟದಿಂದ ಗಳಿಸಿದಂತಹ ಕಾರ್ಮಿಕ ಕಾಯ್ದೆ ಕಾನೂನುಗಳು ಕೈ ತಪ್ಪಿ ಹೋಗಲಿದೆ ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಅಭಿಪ್ರಾಯ ಪಟ್ಟರು.
ಬಂಟ್ವಾಳದ ಎ.ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಎಐಟಿಯುಸಿ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಜರುಗಿದ ಮೇ ದಿನಾಚರಣೆ-2024 ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದರು.
16 ಗಂಟೆ ಕಾರ್ಮಿಕರನ್ನು ದುಡಿಸುತ್ತಿದ್ದ ಮಾಲೀಕರ ದಮನ ನೀತಿಯನ್ನು ಪ್ರತಿರೋಧಿಸಿ 1886 ಮೇ 1 ರಂದು ಅಮೇರಿಕಾದ ಚಿಕಾಗೋ ನಗರದ ಕಾರ್ಮಿಕರ ಹೋರಾಟದ ಪರಿಣಾಮವಾಗಿ ಕೆಲಸದ ಅವಧಿ 8 ಗಂಟೆ ನಿಗದಿಗೊಳಿಸಲಾಗಿತ್ತು. ಆದರೆ
ಈಗಾಗಲೇ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಸಲಾಗಿದೆ. ಈ ಮೂಲಕ ಇಂದು ಕೇಂದ್ರ ಸರ್ಕಾರ ಕಾರ್ಮಿಕರನ್ನು ಜೀತದಾಳಿನಂತೆ ದುಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕೋಡ್ ಗಳಾಗಿ ಮಾರ್ಪಾಡು ಮಾಡಿದ ಪರಿಣಾಮ ಹಲವಾರು ಕಾನೂನುಗಳು ವಜಾಗೊಂಡಿದೆ. ಸರ್ಕಾರದ ಕಾರ್ಪೋರೇಟ್ ಪರ ನೀತಿಗಳು ಕಾರ್ಮಿಕರನ್ನ ದಿವಾಳಿ ಮಾಡುವ ಹುನ್ನಾರ. ಈ ಹಿನ್ನೆಲೆಯಲ್ಲಿ ಬಡವರ ಕಾಳಜಿ ಇಲ್ಲದ ಶ್ರೀಮಂತಪರ ಧೋರಣೆಯ ಮೋದಿ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ಕಾರ್ಮಿಕ ವರ್ಗ ತಕ್ಕ ಪಾಠ ಕಲಿಸುವ ಮೂಲಕ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಟಿಯುಸಿ ಬಂಟ್ವಾಳ ತಾಲೂಕು ಹಿರಿಯ ಮುಖಂಡ ಬಿ.ಬಾಬು ಭಂಡಾರಿ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಐಟಿಯುಸಿ ಜಿಲ್ಲಾ ನಾಯಕಿ ಶಮಿತಾ, ಎಐಟಿಯುಸಿ ಜಿಲ್ಲಾ ಯುವ ನಾಯಕ ಪ್ರೇಮನಾಥ ಕೆ ಉಪಸ್ಥಿತರಿದ್ದರು.
ನೇತೃತ್ವವನ್ನು ಎಐವೈಎಫ್ ನ ಬಂಟ್ವಾಳದ ನಾಯಕ ಹರ್ಷಿತ್, ಮೋಹನ್ ಅರಳ, ಸುರೇಶ್ ಕೆ, ಭಾರತೀಯ ಮಹಿಳಾ ಒಕ್ಕೂಟ ದ ವನಜಾಕ್ಷಿ, ಸರೋಜಿನಿ, ಕುಸುಮಾ ವಹಿಸಿದ್ದರು. ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ, ವಂದಿಸಿದರು.