
ಡೈಲಿ ವಾರ್ತೆ: 27/NOV/2025
ನ. 28 ರಂದು ಪ್ರಧಾನಿ ಮೋದಿ ಕೃಷ್ಣ ಮಠ ಭೇಟಿಗೂ ಮುನ್ನ ಉಡುಪಿಯಲ್ಲಿ ರೋಡ್ ಶೋ

ಉಡುಪಿ: ನವೆಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೃಷ್ಣಮಠ ಭೇಟಿ ಹಿನ್ನೆಲೆ ಭಾರೀ ಸಿದ್ಧತೆಗಳು ನಡೆಯುತ್ತಿದೆ.
ಪ್ರಧಾನಿಯವರು ಆದಿ ಉಡುಪಿ ಹೆಲಿಪಾಡ್‌ನಿಂದ ನಾರಾಯಣ ಗುರು ಸರ್ಕಲ್‌ವರೆಗೆ ರೋಡ್ ಶೋ ನಡೆಸಲಿದ್ದಾರೆ ಎಂದು ದೃಢಪಟ್ಟಿದೆ.
ಕೇಸರಿ ಧ್ವಜದಿಂದ ಅಲಂಕೃತವಾದ ಪಟ್ಟಣ:
ಮೋದಿ ಆಗಮನಕ್ಕಾಗಿ ಪಟ್ಟಣದ ನಾರಾಯಣ ಗುರು ಸರ್ಕಲ್ ಬಳಿ ಹಾಗೂ ಜಯಲಕ್ಷ್ಮಿ ಸಿಲ್ಕ್ಸ್ ಮುಂಭಾಗದಲ್ಲಿ ಸಾಂಸ್ಕೃತಿಕ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಸಿಟಿ ಬಸ್ ನಿಲ್ದಾಣ ಪ್ರದೇಶದಲ್ಲೂ ವಿಶೇಷ ವ್ಯವಸ್ಥೆಗಳು ಮಾಡಲಾಗಿದೆ. ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಕಾರ್ಯಕರ್ತರು ರಸ್ತೆ ಬದಿಯಲ್ಲಿ ಜಮಾವಣೆ ಆಗುವ ನಿರೀಕ್ಷೆ ಇದೆ. ಮೂರು ಕಡೆಗಳಲ್ಲಿ ನಿಧಾನಗತಿಯಲ್ಲೇ ಸಾಗಲಿರುವ ಕಾರಿನಲ್ಲಿ ಪ್ರಧಾನಿಯವರು ಸಾರ್ವಜನಿಕರಿಗೆ ಕೈಬೀಸುತ್ತ ಸಾಗಲಿದ್ದಾರೆ. ಆದಿ ಉಡುಪಿ ಹೆಲಿಪಾಡ್‌ನಿಂದ ಕೃಷ್ಣಮಠದವರೆಗೆ ಎರಡು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಡಿವೈಡರ್‌ಗಳ ಮೇಲೆ ಕೇಸರಿ ಪತಾಕೆಗಳನ್ನು ಸಾಲು ಸಾಲಾಗಿ ಅಲಂಕರಿಸಲಾಗಿದೆ. ಕೃಷ್ಣಮಠ ಕೂಡ ಪ್ರಧಾನಿಯ ಸ್ವಾಗತದ ಸಿದ್ಧತೆಗಳಲ್ಲಿ ತೊಡಗಿದ್ದು, ಸಂಪೂರ್ಣ ರೋಡ್‌ಶೋ ಸುಮಾರು 15 ನಿಮಿಷಗಳವರೆಗೆ ಮುಂದುವರಿಯಲಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಭೇಟಿ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ
ಭದ್ರತಾ ವ್ಯವಸ್ಥೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಮೈಸೂರು, ಬೆಂಗಳೂರು ಶಿವಮೊಗ್ಗ ಜಿಲ್ಲೆಗಳಿಂದ 3000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದ್ದು, 10 ಎಸ್ಪಿ, 27 ಡಿವೈಎಸ್ಪಿ, 49 ಇನ್ಸ್ಪೆಕ್ಟರ್, 127 ಎಸ್ ಐ, 232 ಎ ಎಸ್ ಐ, 1608 ಪಿಸಿ, 39 ಡಬ್ಲ್ಯೂ ಪಿ ಸಿ , 48 ಬಿಡಿಡಿಎಸ್ ಟೀಂ, ಆರು ksrp, ಆರು ಕ್ಯೂಆರ್‌ಟಿ ಟೀಮ್ ನಿಯೋಜನೆ ಮಾಡಲಾಗಿದೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಯಲಿದ್ದು, ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವಾಡ್ಗಳಿಂದ ಪರಿಶೀಲನೆ ನಡೆಯುತ್ತಿದೆ.