ಡೈಲಿ ವಾರ್ತೆ: 27/NOV/2025

ಹಾಂಗ್ ಕಾಂಗ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 44ಕ್ಕೆ ಏರಿಕೆ, 279 ಮಂದಿ ನಾಪತ್ತೆ

ತೈಪೊ: ಹಾಂಗ್ ಕಾಂಗ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ದುರಂತದಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. 279 ಜನರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.

ರಕ್ಷಣಾ ಕಾರ್ಯಕರ್ತರು ಇನ್ನೂ ಎತ್ತರದ ಅಪಾರ್ಟ್‌ಮೆಂಟ್ ಕಟ್ಟಡಗಳಿಂದ ನಿವಾಸಿಗಳನ್ನು ಹೊರಗೆಳೆಯುತ್ತಿದ್ದಾರೆ.

ಸದ್ಯ 900ಕ್ಕೂ ಹೆಚ್ಚು ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸುಮಾರು 2,000 ಅಪಾರ್ಟ್‌ಮೆಂಟ್‌ಗಳನ್ನ ಹೊಂದಿರುವ ಈ ಬೃಹತ್ ವಸತಿ ಸಮುಚ್ಚಯದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಇದಕ್ಕಾಗಿ ಕಟ್ಟಡಗಳ ಹೊರಭಾಗದಲ್ಲಿ ಬಿದಿರಿನ ಅಟ್ಟಣಿಗೆ ರಚಿಸಲಾಗಿತ್ತು. ಈ ಬಿದಿರಿನ ರಚನೆಗಳಿಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಬಲವಾದ ಗಾಳಿ ಮತ್ತು ಉರಿಯುತ್ತಿದ್ದ ಅವಶೇಷಗಳು ತೂರಿಬಂದ ಪರಿಣಾಮ, ಪಕ್ಕದ 7 ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ