
ಡೈಲಿ ವಾರ್ತೆ: ಫೆ./04/2026
ಉಡುಪಿ ಜಿಲ್ಲೆಯ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ – ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ

ಉಡುಪಿ: ಅಂಗಡಿ ಮುಂಗಟ್ಟು ಹಾಗೂ ಹೋಟೆಲ್‌ಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಸ್ವಾಗತಾರ್ಹವಾಗಿದ್ದು, ಅದೇ ರೀತಿಯ ದಿಟ್ಟ ನಿರ್ಧಾರವನ್ನು ಉಡುಪಿ ಜಿಲ್ಲಾಧಿಕಾರಿಗಳು ಯಾವಾಗ ಕೈಗೊಳ್ಳುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ್ ರಾಜ್ ಪೂಜಾರಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರಕಟಣೆ ನೀಡಿದ ಅವರು, ನೆರೆ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕನ್ನಡ ಅನುಷ್ಠಾನದ ಕುರಿತಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಆದರೆ ಸಾಂಸ್ಕೃತಿಕ ನಗರಿ, ಪರಶುರಾಮ ಸೃಷ್ಟಿಯ ಉಡುಪಿಯಲ್ಲಿ ನಾಮಫಲಕಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿರುವುದು ಅತ್ಯಂತ ವಿಷಾದನೀಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಪರಭಾಷೆಯ ಪ್ರಾಬಲ್ಯ ದಿನೇದಿನೇ ಹೆಚ್ಚುತ್ತಿದ್ದು, ನಾಮಫಲಕಗಳಲ್ಲಿ ಕನ್ನಡದ ಅಕ್ಷರಗಳು ಅತೀ ಸಣ್ಣದಾಗಿ ಅಥವಾ ಸಂಪೂರ್ಣವಾಗಿ ಮಾಯವಾಗುತ್ತಿರುವುದು ಕನ್ನಡಾಭಿಮಾನಿಗಳಿಗೆ ನೋವುಂಟು ಮಾಡುತ್ತಿದೆ.
ರಾಜ್ಯ ಸರ್ಕಾರದ ನಿಯಮದಂತೆ ನಾಮಫಲಕಗಳಲ್ಲಿ ಕನಿಷ್ಠ ಶೇ. 60ರಷ್ಟು ಕನ್ನಡ ಬಳಕೆಯಾಗಬೇಕು ಎಂಬ ನಿಯಮ ಇದ್ದರೂ, ಉಡುಪಿ ಜಿಲ್ಲೆಯಲ್ಲಿ ಅದರ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಎಚ್ಚರಿಕೆ ಮತ್ತು ಆಗ್ರಹ:
ಕೇವಲ ಆದೇಶ ಹೊರಡಿಸುವುದರಿಂದ ಪ್ರಯೋಜನವಿಲ್ಲ, ಅದು ಕಾರ್ಯರೂಪಕ್ಕೆ ಬರಬೇಕು. ಉಡುಪಿ ಜಿಲ್ಲಾಡಳಿತವು ತಕ್ಷಣ ಎಚ್ಚೆತ್ತುಕೊಂಡು ಜಿಲ್ಲೆಯಾದ್ಯಂತ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಕುರಿತು ಅಧಿಕೃತ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಕನ್ನಡ ಉಳಿವಿನ ಹೋರಾಟದ ಭಾಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲು ನಿರ್ಬಂಧಿತವಾಗುತ್ತದೆ ಎಂದು ಪ್ರಭಾಕರ್ ಪೂಜಾರಿ ಎಚ್ಚರಿಸಿದರು.