ಡೈಲಿ ವಾರ್ತೆ: 19/ಮೇ /2024
ಶಿರೂರು:ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು!
ಬೈಂದೂರು: ಮನೆಯ ಗೇಟ್ ಎದುರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಮುದ್ರುಮಕ್ಕಿ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಮುದ್ರುಮಕ್ಕಿ ಸಮೀಪದ ನಿವಾಸಿ ಕುರುಡಿ ಇರ್ಷಾದ್(52) ಎಂದು ಗುರುತಿಸಲಾಗಿದೆ.
ಶನಿವಾರ ತಡರಾತ್ರಿ ಸುರಿದ ಗಾಳಿಮಳೆಗೆ ಹಡವಿನ ಕೋಣೆಯಿಂದ ಮುದ್ರುಮಕ್ಕಿಗೆ ತೆರಳುವ ಮಾರ್ಗದಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇರ್ಷಾದ್ ಮನೆಯೊಳಕ್ಕೆ ಸತ್ತುಹೋದ ಇಲಿಯನ್ನು ಹೊರಕ್ಕೆ ಬೀಸಾಡುವ ಸಲುವಾಗಿ ಇಂದು ಬೆಳಗ್ಗೆ ಗೇಟ್ ದಾಟಿ ಹೊರಕ್ಕೆ ಬಂದಿದ್ದು, ಈ ವೇಳೆ ಗೇಟ್ ಎದುರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದರೆನ್ನಲಾಗಿದೆ.
ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಅವರು ತೀವ್ರವಾಗಿ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಬೈಂದೂರು ಮೆಸ್ಕಾಂನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.