ಡೈಲಿ ವಾರ್ತೆ: 21/ಮೇ /2024

ದಕ್ಷಿಣ ಕನ್ನಡ: ಸಿಸಿಬಿ ಪೊಲೀಸರ ಕಾರ್ಯಾಚರಣೆ – ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಇಬ್ಬರು ವ್ಯಕ್ತಿಗಳ ಬಂಧನ

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲನ್ನು ವಶದಲ್ಲಿರಿಸಿಕೊಂಡಿದ್ದ ತಿರುಗಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೊಹಮ್ಮದ್ ಅಸ್ಕರ್(26) ಮತ್ತು ಅಬ್ದುಲ್ ನಿಸಾರ್.ಕೆ (29) ಎಂದು ತಿಳಿದು ಬಂದಿದೆ.

ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ಇಬ್ಬರು ಕಪ್ಪು ಬಣ್ಣದ ಕಾರಿನಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧ ಪಿಸ್ತೂಲ್ ಇಟ್ಟುಕೊಂಡು ಯಾವುದೋ ದುಷ್ಕೃತ್ಯ ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಪಿಸ್ತೂಲ್, ಸಜೀವ ಮದ್ದುಗುಂಡುಗಳು, ಮೊಬೈಲ್ ಫೋನುಗಳು, ಹಾಗೂ ಕಪ್ಪು ಬಣ್ಣದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 7,15,000 ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.