ಡೈಲಿ ವಾರ್ತೆ: 23/ಮೇ /2024
2024ರ ಐಪಿಎಲ್‌ಗೆ ವಿದಾಯ; ಅಭಿಮಾನಿಗಳೊಂದಿಗೆ ಸಿಹಿ-ಕಹಿ ನೆನಪು ಹಂಚಿಕೊಂಡ ಆರ್‌ಸಿಬಿ! ಕುಗ್ಗದಿರಿ ʻಮುಂದಿನ ಸಲ ಕಪ್ ನಮ್ದೇʼ ಅಂದ್ರು ಫ್ಯಾನ್ಸ್
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ (IPL 2024) ಲೀಗ್‌ನಲ್ಲಿ ʻಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂಬ ಘೊಷವಾಕ್ಯದೊಂದಿಗೆ ಸರಣಿ ಆರಂಭಿಸಿದ ಆರ್‌ಸಿಬಿ, 2024ರ ಆವೃತ್ತಿಗೆ ವಿದಾಯ ಹೇಳಿದೆ. ಆವೃತ್ತಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಆರ್‌ಸಿಬಿ ತಂಡ ಈ ಬಾರಿಯೂ ಕಪ್ ಗೆಲ್ಲದೇ ಸೋಲಿನೊಂದಿಗೆ ಹಿಂತಿರುಗಿದೆ. ಅಭಿಮಾನಿಗಳ ನಡುವೆ ನೂರಾರು ನೆನಪುಗಳನ್ನು ಬಿಟ್ಟುಹೋಗಿದೆ
17ನೇ ಆವೃತ್ತಿಯಲ್ಲಿ ಕಂಡ ಅನೇಕ ಏಳು-ಬೀಳುಗಳ ನೆನಪುಗಳನ್ನು ಮೆಲುಕು ಹಾಕಿರುವ ಆರ್‌ಸಿಬಿ ಫ್ರಾಂಚೈಸಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದು, ಮುಂದಿನ ಸಲ ಕಪ್ ನಮ್ದೇ ಅನ್ನೋ ಸಂದೇಶವನ್ನೂ ನೀಡಿದೆ.
ಈ ಆವೃತ್ತಿಯಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದೇವೆ. ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನು ನೆನಪಿನಲ್ಲಿಡುವ, ಪಾಲಿಸುವ ಪ್ರಯಾಣವೂ ಇದಾಗಿದೆ. ನೀವು ಮೈದಾನದಲ್ಲಿ ತೋರಿದ ಪಾತ್ರದ ಬಗ್ಗೆ ಆರ್‌ಸಿಬಿ ಅಭಿಮಾನಿಗಳಿಗೆ ಹೆಮ್ಮೆಯಿದೆ. ಹಾಗಾಗಿ ಖಚಿತವಾಗಿ ಹೇಳಬಹುದು ʻಆರ್‌ಸಿಬಿಯನ್ ಯಾವಾಗಲೂ ಆರ್‌ಸಿಬಿಯನ್ʼ ಎಂದು ಫ್ರಾಂಚೈಸಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಆರ್‌ಸಿಬಿಯ ಈ ಭಾವುಕ ಸಂದೇಶಕ್ಕೆ ಅಭಿಮಾನಿಗಳೂ ಭಾವುಕರಾಗಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲದೇ ಇದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಅದುವೇ ನಮಗೆ ಸಾಕು. ಆತ್ಮವಿಶ್ವಾಸ ಎಂದಿಗೂ ಕಳೆದುಕೊಳ್ಳದಿರಿ, ನಾವು ಎಂದೆಂದೆಗೂ ನಿಮ್ಮ ಅಭಿಮಾನಿಗಳೇ.. ʻಮುಂದಿನ ಸಲ ಕಪ್ ನಮ್ದೇʼ ʻಜೈ ಆರ್‌ಸಿಬಿʼ ಎಂದೆಲ್ಲಾ ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.