



ಡೈಲಿ ವಾರ್ತೆ: 20/ಅ./2025

2 ದಿನ ಕ್ಲಾಸಿಗೆ ಬರದಿದ್ದಕ್ಕೆ ಕತ್ತಲು ರೂಮಿನಲ್ಲಿ ಕೂಡಿಹಾಕಿ ಪೈಪ್ ನಿಂದ ಹೊಡೆದು ವಿದ್ಯಾರ್ಥಿಗೆ ಚಿತ್ರಹಿಂಸೆ – ಪ್ರಕರಣ ದಾಖಲು

ಬೆಂಗಳೂರು: ಎರಡು ದಿನ ಕ್ಲಾಸಿಗೆ ಬರದಿದ್ದಕ್ಕೆ ವಿದ್ಯಾರ್ಥಿಯನ್ನು ಕತ್ತಲು ರೂಮಿನಲ್ಲಿ ಕೂಡಿಹಾಕಿ ಪಿವಿಸಿ ಪೈಪ್ ನಿಂದ ಹೊಡೆದು ಚಿತ್ರಹಿಂಸೆ ಕೊಟ್ಟಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯೊಂದಲ್ಲಿ ನಡೆದಿದೆ.
ಶಿಕ್ಷಕನ ಈ ಕೃತ್ಯದಿಂದ ಐದನೇ ತರಗತಿ ವಿದ್ಯಾರ್ಥಿ ಭಯಗೊಂಡು ನರಳಾಡುತ್ತಿದ್ದು, ಹಲ್ಲೆ ಬಳಿಕ ಬಾಲಕ ಮನೆಯಲ್ಲಿ ಕಿರುಚಾಡುತ್ತ ಓಡಾಡುತ್ತ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಗನ ಈ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದು, ಶಿಕ್ಷಕರ ವಿರುದ್ದ ಆಕ್ರೋಶಗೊಂಡಿದ್ದಾರೆ.
ಸುಂಕದಕಟ್ಟೆಯಲ್ಲಿರುವ ಖಾಸಗಿ ಶಾಲೆಯಲ್ಲಿ ದಿವ್ಯ ದಂಪತಿ ಮಗ ಐದನೇ ತರಗತಿಯಲ್ಲಿ ಓದುತ್ತಿದ್ದಾನೆ.
ಆದರೆ ಕಳೆದ ವಾರ ಎರಡು ದಿನ ಕ್ಲಾಸ್ ಗೆ ಹೋಗಿರಲಿಲ್ವಂತೆ. ಇಷ್ಟಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ಕೆಲ ಟೀಚರ್ಸ್ ಕ್ಲಾಸ್ ಬಿಟ್ಟ ನಂತರ ಕ್ಲಾಸ್ ರೂಮಿನಲ್ಲಿ ಕೂಡಿಹಾಕಿ ಪಿವಿಸಿ ಪೈಪ್ ನಿಂದ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ.
ನಂತರ ಡಾರ್ಕ್ ರೂಮ್‌ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟಿದ್ದಾರಂತೆ. ಇದರಿಂದ ದೇಹದ ಕೆಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದು ಆಸ್ಪತ್ರೆಗೆ ಸೇರಿಸಿದ್ದಾರಂತೆ. ಇನ್ನು ಹಲ್ಲೆಯಾದ ನಂತರ ಮನೆಯಲ್ಲಿ ಮಗು ಒಂಥರ ವಿಚಿತ್ರವಾಗಿ ಕಿರುಚಾಡುತ್ತ, ಓಡಾಡುತ್ತಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಮಗುವಿನ ಸ್ಥಿತಿಗೆ ಪೋಷಕರು ಕಂಗಾಲಾಗಿದ್ದಾರೆ.
ಇಷ್ಟೆಲ್ಲಾ ಹಲ್ಲೆ ಮಾಡಿದ ನಂತರವೂ ಶಾಲಾ ಆಡಳಿತ ಮಂಡಳಿಯವರು ಒಂದೇ ಒಂದು ಕಾಲ್ ಮಾಡಿ ಮಗುವಿನ ಆರೋಗ್ಯ ವಿಚಾರಿಸಿಲ್ಲ. ಬದಲಾಗಿ ಅ ವಿದ್ಯಾರ್ಥಿಯೇ ಗಾಂಜಾ ಸೇವನೆ ಮಾಡುತ್ತಾನೆ ಎಂದು ತಮ್ಮ ತಪ್ಪು ಮುಚ್ಚಿಕೊಳ್ಳಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.
ಹಾಗೇನಾದರೂ ನನ್ನ ಮಗ ಅಂತಹ ಕೆಲಸ ಮಾಡಿದರೆ ಮೆಡಿಕಲ್ ಮಾಡಿಸಲಿ. ತಪ್ಪು ಮಾಡಿದ್ರೆ ಶಿಕ್ಷೆ ಕೊಡಲಿ. ಅದು ಬಿಟ್ಟು ತಮ್ಮ ತಪ್ಪು ಮುಚ್ಚಿಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶಗೊಂಡಿದ್ದು, ಈ ಸಂಬಂಧ ಶಾಲೆ ವಿರುದ್ಧ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕೇಸ್ ನ ಅಧಾರದ ಮೇಲೆ ಪೋಲೀಸರು ಪ್ರಾಂಶುಪಾಲರು, ಕೆಲ ಟೀಚರ್ಸ್ ಗೆ ನೋಟೀಸ್ ನೀಡಿ ವಿಚಾರಣೆ ನಡೆಸಿದ್ದು, ಶಾಲೆಯಲ್ಲಿ ನಡೆದಿರುವ ಘಟನೆ ಸಂಬಂಧ ಶಿಕ್ಷಣ ಇಲಾಖೆಯ BEO, DDPI ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಬಾಲಕನ ದೇಹದಲ್ಲಿ ಗಾಯಗಳು ಗುರುತು ಕಂಡು ಬಂದಿದ್ದು ಕ್ರಮ ಕೈಗೊಳ್ಳುವಂತೆ ಪೋಲಿಸರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.