ಡೈಲಿ ವಾರ್ತೆ: 31/ಮೇ /2024
ಅಶ್ಲೀಲ ವಿಡಿಯೋ ಪ್ರಕರಣ: ಏರ್ಪೋರ್ಟ್ನಲ್ಲಿ ಪ್ರಜ್ವಲ್ ರೇವಣ್ಣನ ಬಂಧನ
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ 34 ದಿನಗಳ ಬಳಿಕ ಬೆಂಗಳೂರಿಗೆ ಮರಳಿದ್ದು ಅರೆಸ್ಟ್ ಆಗಿದ್ದಾರೆ. ನೋಟಿಸ್ ಮೇಲೆ ನೋಟಿಸ್ ಕೊಟ್ರೂ ಪ್ರಜ್ವಲ್ ಜಗ್ಗಿರಲಿಲ್ಲ. ಲುಕ್‌ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್‌ಗೂ ಕ್ಯಾರೆ ಎಂದಿರಲಿಲ್ಲ. ರಾಜಕೀಯ ಜಂಗೀಕುಸ್ತಿ ನಡೀತಿದ್ರೂ ಪ್ರತ್ಯಕ್ಷವಾಗಿರಲಿಲ್ಲ. ದೇಶಾದ್ಯಂತ ಚರ್ಚೆಯಾಗ್ತಿದ್ರೂ ಸುಳಿವೇ ಇರಲಿಲ್ಲ. ಆದ್ರೀಗ 34 ದಿನ ಕಣ್ಣಾಮುಚ್ಚಾಲೆ ಆಟ ಕೊನೆಗೂ ಅಂತ್ಯವಾಗಿದೆ.
ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದೇವೇಗೌಡರು ಖಡಕ್ ವಾರ್ನಿಂಗ್ ಕೊಟ್ಟ ಒಂದೇ ವಾರದೊಳಗೆ ಪ್ರಜ್ವಲ್ ರೇವಣ್ಣ ಎಸ್ಐಟಿ (SIT) ಮುಂದೆ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಬಂದಿಳಿದಿದ್ದು ಏರ್ಪೋರ್ಟ್ನಲ್ಲಿ ಪ್ರಜ್ವಲ್ ರೇವಣ್ಣ ಬಂಧನ ಪ್ರಕ್ರಿಯೆ ಹೇಗಿತ್ತು ಎಂಬ ಬಗ್ಗೆ ಇಲ್ಲಿದೆ ವಿವರಣೆ.
ಜರ್ಮನಿಯಿಂದ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್:
ಲೋಕಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಏಪ್ರಿಲ್ 26ರಂದು ರಾತ್ರೋರಾತ್ರಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡಿದ್ದರು. ಆನಂತರ ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾರೆ ಅನ್ನೋದು ಕನ್ಫರ್ಮ್ ಆಗಿರಲಿಲ್ಲ. ಮೊನ್ನೆ ಮೊನ್ನೆ ಮೇ 27ರಂದು ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಪ್ರಜ್ವಲ್ ಮೇ 31ರಂದು ಬೆಂಗಳೂರಿಗೆ ಬಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗೋದಾಗಿ ತಿಳಿಸಿದ್ದರು. ಇದಾದ ಬೆನ್ನಲ್ಲೇ ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿದ್ರು. ಲುಫ್ತಾನ್ಸಾ ಏರ್‌ಲೈನ್ಸ್ LH 764 ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಕಾಯ್ದಿರಿಸಿದ್ದರು. ಕಳೆದ 34 ದಿನಗಳಿಂದ ಎಸ್‌ಐಟಿಗೆ ಚಳ್ಳೇಹಣ್ಣು ತಿನ್ನಿಸಿದ್ದ ಪ್ರಜ್ವಲ್ ನಿನ್ನೆ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದ್ರು.
ತಡರಾತ್ರಿ 1.20ರ ಸುಮಾರಿಗೆ SITಯಿಂದ ಅರೆಸ್ಟ್
ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಸಂಜೆ 4.05ಕ್ಕೆ ಮ್ಯೂನಿಕ್‌ನಿಂದ ಹೊರಟ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನ ತಡರಾತ್ರಿ 12.50 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯ್ತು. ಪ್ರಜ್ವಲ್ ರೇವಣ್ಣ ಅರೆಸ್ಟ್ ಮಾಡಲಿಕ್ಕಾಗಿ ಏರ್‌ಪೋರ್ಟ್‌ನಲ್ಲಿ ಎಸ್ಐಟಿ ಅಧಿಕಾರಿಗಳ ಟೀಂ ಕಾದು ಕುಳಿತಿತ್ತು. ವಿಮಾನ ನಿಲ್ದಾಣದ ಭದ್ರತಾ ಪಡೆಯಿಂದ ವಿಶೇಷ ಅನುಮತಿ ಪಡೆದು ವಲಸೆ ವಿಭಾಗದ ಬಳಿ ಕಾದು ಕುಳಿತಿದ್ರು. ಪ್ರಜ್ವಲ್ ವಿಮಾನದಿಂದ ಕೆಳಗಿಳಿದು ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ಅವರ ಪಾಸ್‌ಪೋರ್ಟ್ ಸೇರಿದಂತೆ ಕೆಲ ದಾಖಲಾತಿಗಳನ್ನು ಪರಿಶೀಲಿಸಿ ವಶಕ್ಕೆ ತೆಗೆದುಕೊಂಡರು. ಬಳಿಕ ರಾತ್ರಿ 1.20 ಕ್ಕೆ ಎಸ್‌ಐಟಿ ಅಧಿಕಾರಿಗಳ ವಶಕ್ಕೆ ಪ್ರಜ್ವಲ್‌ರನ್ನು ಒಪ್ಪಿಸಿದರು.