ಡೈಲಿ ವಾರ್ತೆ: 02/ಜೂ./2024

ಕೋಟ: ಅಪಘಾತದಲ್ಲಿ ಮೃತಪಟ್ಟ ವಾಸುದೇವ ಅವರ ಮನೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭೇಟಿ

ಕೋಟ : ಕೋಟ ಸರ್ಕಲ್ ನಲ್ಲಿ ಶನಿವಾರ ರಾತ್ರಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ವಾಸುದೇವ ಅವರ ಮನೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.


ರಾಷ್ಟ್ರೀಯ ಹೆದ್ದಾರಿ 66 ರ ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ ಈ ಸರ್ಕಲ್ ಗಳಲ್ಲಿ ಹೆಚ್ಚುತ್ತಿರುವ ಅಪಘಾತದಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ನಡೆಸಿದ್ದು, ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಅವರು ಜಯಪ್ರಕಾಶ್ ಹೆಗ್ಡೆಯವರ ಗಮನಕ್ಕೆ ತಂದರು. ಇಕ್ಕಟ್ಟಾದ ಸರ್ವಿಸ್ ರಸ್ತೆ, ಮಣ್ಣು, ಕಸ ತುಂಬಿದ ಹೆದ್ದಾರಿ, ರಾತ್ರಿ ವೇಳೆ ಬೆಳಗದ ದಾರಿ ದೀಪ, ರಸ್ತೆ ಸುರಕ್ಷಾ ನಿಯಮ ಪಾಲಿಸದೇ ನುಗ್ಗುವ ಪಾದಚಾರಿಗಳು ಮೊದಲಾದ ಹಲವು ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗಿ ಅಮಾಯಕರನ್ನು ಬಲಿಪಡೆಯುತ್ತಿವೆ ಎಂಬ ಅಂಶಗಳನ್ನು ತಿಳಿಸಲಾಯಿತು.

ಸಮಸ್ಯೆಗಳ ಕಡೆ ಗಮನಹರಿಸಿ, ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಜಯಪ್ರಕಾಶ್ ಹೆಗ್ಡೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗೋಪಾಲ್ ಬಂಗೇರ, ವಿನಯ ಕಬ್ಯಾಡಿ, ದಿನೇಶ್ ಗಾಣಿಗ,  ನಾಗೇಂದ್ರ ಪುತ್ರನ್ ಉಪಸ್ಥಿತರಿದ್ದರು.