ಡೈಲಿ ವಾರ್ತೆ: 05/ಜೂ./2024

ಬಂಟ್ವಾಳ: ಕಾಂಕ್ರೀಟ್ ಕೆಲಸದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಸಾವು

ಬಂಟ್ವಾಳ : ಮನೆಯೊಂದರ ಮಹಡಿಯಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಕಾರ್ಮಿಕರೋರ್ವರು ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಬುಧವಾರ ನಡೆದಿದೆ.

    ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ತಡ್ಯಾಲು ನಿವಾಸಿ ಪ್ರಕಾಶ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಕೂಡಲೇ  ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

   ಅಮ್ಟಾಡಿ ಗ್ರಾ.ಪಂ.ಸದಸ್ಯನಾಗಿದ್ದ ಇವರು ಸಾಮಾಜಿಕವಾಗಿ ಉತ್ತಮ ಕೆಲಸಗಾರನಾಗಿದ್ದರು‌.
ಬಡಾಜೆ ಎಂಬಲ್ಲಿ ಮನೆಯೊಂದರ ಎರಡನೇ ಮಹಡಿಗೆ ಇವರು ಸೇರಿ ಒಟ್ಟು ಮೂರು ಮಂದಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು.
ಆದರೆ ಏಕಾಏಕಿ ಕಾಂಕ್ರೀಟ್ ಹಲಗೆಗಳು ಮತ್ತು ಜಾಕ್ ಗಳು ಮುರಿದು ಬಿದ್ದ ಪರಿಣಾಮ ಇಬ್ಬರು ಕೆಳಗೆ ಹಾರಿದ್ದಾರೆ. ಪ್ರಕಾಶ್ ಮಾತ್ರ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ದಾರಿ ಮಧ್ಯೆ ಸಾವನ್ನಪ್ಪಿದ ಬಗ್ಗೆ ತಿಳಿಸಿದ್ದಾರೆ.

ಉಳಿದಂತೆ ಇನ್ನಿಬ್ಬರು ಕೆಲಸಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.