ಡೈಲಿ ವಾರ್ತೆ: 07/ಜೂ./2024

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು: ಮೂವರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಗರಗೆರೆ ಬಳಿಯ‌ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ತಗ್ಗು ಪ್ರದೇಶಕ್ಕೆ ನುಗ್ಗಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ ಬೆಸ್ಕಾಂ ಶಾಖೆಯ ಲೈನ್‌‌ಮ್ಯಾನ್‌ಗಳಾದ ಶ್ರೀಧರ್(28), ವೇಣು ಗೋಪಾಲ್(38), ಮಂಜುನಾಥ್(37) ಎಂದು ಗುರುತಿಸಲಾಗಿದೆ. 

ಕಳೆದ ರಾತ್ರಿ ಗೌರಿಬಿದನೂರು ತಾಲ್ಲೂಕು ನಗರಗೆರೆ-ವಾಟದಹೊಸಹಳ್ಳಿ ರಸ್ತೆಯಲ್ಲಿ ಬರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿದೆ. ಇದರಿಂದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಶಿವಕುಮಾರ್‌ ಎಂಬಾತ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ನಗರಗೆರೆ ಬಳಿ ತಿರುವು ಇರುವುದರಿಂದ ಮುಂಜಾನೆ ಸಮಯದಲ್ಲಿ ಚಾಲಕ ನಿದ್ರೆಗೆ ಜಾರಿದ್ದು ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.