ಡೈಲಿ ವಾರ್ತೆ: 10/ಜೂ./2024

ಗುಂಡ್ಲುಪೇಟೆ: ಅಕ್ರಮವಾಗಿ ಗೂಡ್ಸ್ ಆಟೋದಲ್ಲಿ ಗೋಸಾಗಾಟ – ಓರ್ವನ ಬಂಧನ, 5 ಜಾನುವಾರುಗಳ ರಕ್ಷಣೆ

ಚಾಮರಾಜನಗರ: ಬೇಗೂರು ಸಂತೆಯಿಂದ ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಐದು ಜಾನುವಾರುಗಳನ್ನು ರಕ್ಷಣೆ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಕಮರಹಳ್ಳಿ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಗುಂಡ್ಲುಪೇಟೆ ಪಟ್ಟಣದ ಗೂಡ್ಸ್ ಆಟೋ ಚಾಲಕ ಅಬ್ದುಲ್ ಜಬ್ಬಾರ್ ಬಂಧಿತ ಆರೋಪಿ. ಉಳಿದ ಇರ್ಷಾದ್ ಹಾಗೂ ಜಾಕೀರ್ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಬೇಗೂರು ಸಂತೆಯಿಂದ ಕಮರಹಳ್ಳಿ ಮಾರ್ಗವಾಗಿ ಐದು ಜಾನುವಾರುಗಳನ್ನು ಕಸಾಯಿ ಖಾನೆಗೆ ಅಕ್ರಮವಾಗಿ ಗೂಡ್ಸ್ ಆಟೋದಲ್ಲಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೇಗೂರು ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ನೇತೃತ್ವದ ತಂಡ ದಾಳಿ ನಡೆಸಿ, ಆಟೋ ಸಮೇತ ಜಾನುವಾರುಗಳನ್ನು ಹಿಡಿದಿದ್ದಾರೆ. ಈ ವೇಳೆ ಚಾಲಕ ಅಬ್ದುಲ್ ಜಬ್ಬಾರ್ ಸಿಕ್ಕಿಬಿದ್ದಿದ್ದು, ಇರ್ಷಾದ್ ಹಾಗೂ ಜಾಕೀರ್ ಇಬ್ಬರು ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ಜಾನುವಾರುಗಳನ್ನು ಬರಗಿ ಗೋಶಾಲೆಗೆ ರವಾನಿಸಿದ್ದಾರೆ. ಜೊತೆಗೆ ಪರಾರಿಯಾದ ಇಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.