ಡೈಲಿ ವಾರ್ತೆ: 17/ಜೂ./2024

ಡಾ. ಸುನೀಲ ಪರೀಟರ ಎರಡು ಕೃತಿಗಳ ಲೋಕಾರ್ಪಣೆ – ಮಕ್ಕಳ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ಅಗತ್ಯ: ಮಂಗಲಾ ಮೆಟಗುಡ್ಡ

ಬೆಳಗಾವಿ 17: ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯಕ್ಕೆ ಅಷ್ಟೊಂದು ಪ್ರಾಮುಖ್ಯತೆ ಸಿಗದೇ ಇರುವುದಕ್ಕೆ ಮಕ್ಕಳ ಸಾಹಿತ್ಯ ಒಂದು ರೀತಿ ನಿರ್ಲಕ್ಷಕ್ಕೊಳಪಟ್ಟಿದೆ ಎಂಬಂತೆ ಭಾಸವಾಗುತ್ತಿದೆ. ಇವತ್ತಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚಿಸುವವರು ಸಹ ಬಹಳ ವಿರಳವಾಗಿದ್ದಾರೆ. ನಮ್ಮ ಸಮಾಜದ ಮುಂದಿನ ಭವಿಷ್ಯವಾಗಿರುವ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಜ್ಞಾನದ ಬೆಳಕನ್ನು ನೀಡುವಂತಹ ಮತ್ತು ಮಕ್ಕಳ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕಥೆ, ಕಾದಂಬರಿ, ಕವನಗಳು, ನಾಟಕಗಳು ಹಾಗೂ ಚುಟುಕುಗಳು ಮೂಡಿ ಬರಬೇಕು. ಮಕ್ಕಳ ಸಾಹಿತ್ಯಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ ಬೆಳಸುವಲ್ಲಿ ಪ್ರಯತ್ನಿಸುವುದು ಇಂದಿನ ಅನಿವಾರ್ಯ ತೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅಭಿಮತ ವ್ಯಕ್ತಪಡಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸುನೀಲ ಪರೀಟ ಅವರ ಸ್ವರಚಿತ ಮಕ್ಕಳ ಕವನ ಸಂಕಲನ “ಓ ನನ್ನ ಕಂದ” ಹಾಗೂ ಸಂಪಾದಿತ ಕೃತಿ “ನಮ್ಮ ಅನ್ನದಾತ” ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಗರದ ಮ.ನ.ರ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಿರ್ಮಲಾ ಬಟ್ಟಲ ಅವರು ಓ ನನ್ನ ಕಂದ ಪುಸ್ತಕವನ್ನು ಪರಿಚಯಿಸಿ ಮಾತನಾಡಿದ ಅವರು ಇಂತಹ ಮಕ್ಕಳ ಕವನ ಸಂಕಲನಗಳು ಮಕ್ಕಳ ಮನಸ್ಸನ್ನು ಹದಗೊಳಿಸುತ್ತವೆ, ಮಕ್ಕಳಿಗೆ ಮೊಬೈಲ ಬದಲಿಗೆ ಇಂತಹ ಕೃತಿಗಳನ್ನು ನೀಡುವುದು ಒಳ್ಳೆಯದು. ಮಕ್ಕಳಿಗೆ ಪ್ರಾಸ ಬದ್ಧವಾದ ಲಯ ಹಾಗೂ ರಾಗವುಳ್ಳ ಕವಿತೆಗಳು ಹಾಡುಗಳು ಇಷ್ಟವಾಗುತ್ತವೆ. ಡಾ. ಸುನೀಲ ಪರೀಟ ಅವರ ಈ ಕೃತಿ ನಿಜಕ್ಕೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸುವುದು ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

ಖಾನಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಅ.ಬ. ಇಟಗಿ ಅವರು ನಮ್ಮ ಅನ್ನದಾತ ಕೃತಿಯನ್ನು ಪರಿಚಯಿಸಿ ಮಾತನಾಡಿದ ಅವರು ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಹೇಳಿದರೆ ಸಾಲದು ಅಂತ ನಮ್ಮ ರೈತರಿಗೋಸ್ಕರ ನಮ್ಮ ಅನ್ನದಾತರಿಗೋಸ್ಕರ ನಮ್ಮ ಕೈಲಾದ ಸಹಾಯವನ್ನು ಅಥವಾ ಉಪಕಾರವನ್ನು ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡಾಗ ಮಾತ್ರ ರೈತರು ನೆನಪಾಗುವವರು ಆ ರೈತರು ಆತ್ಮಹತ್ಯೆ ಮಾಡಿಕೊಳ್ಳದ ಹಾಗೆ ನಮ್ಮ ವ್ಯವಸ್ಥೆ ಬದಲಾಗಬೇಕಾಗಿದೆ. ಈ ಕೃತಿಯಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದಲೂ ಕವಿ ಮನಸುಗಳು ತಮ್ಮ ರಚನೆಯಲ್ಲಿ ರೈತರ ಕಷ್ಟ ಸುಖಗಳ ಭವಣೆಗಳ ಕುರಿತು ಅವರ ಜೀವನ ಚರಿತ್ರೆಯನ್ನೇ ಚಿತ್ರಿಸಲಾಗಿದೆ. ರೈತರು ನಮ್ಮೆಲ್ಲರ ಹೊಟ್ಟೆಯನ್ನು ತುಂಬಲು ಹಗಲಿರುವುದು ದುಡಿಯುತ್ತಾರೆ ಆದರೆ ನಿಜ ಜೀವನದಲ್ಲಿ ಅವರು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ರೈತರ ಜೀವನದ ಮೇಲೆ ಬೆಳಕನ್ನು ಚೆಲ್ಲುವ ಇಂತಹ ಕೃತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮೈಲುಗಲ್ಲು ಎಂದು ಹೇಳಿದರು.

ನಗರದ ಹಿರಿಯ ಸಾಹಿತಿ ಸ.ರಾ. ಸುಳಕೂಡೆ ಮುಖ್ಯ ಅತಿಥಿಗಳಾಗಿ ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಇಂಥ ಕೃತಿಗಳು ಹೊಸ ಬೆಳಕನ್ನು ಮೂಡಿಸುತ್ತದೆ, ಸಾಹಿತ್ಯವು ನಿಂತ ನೀರಲ್ಲ ಅದು ಯಾವತ್ತೂ ಹರಿಯುತ್ತಿರುತ್ತದೆ ಪರಿವರ್ತನೆ ಯಾಗುತ್ತಿರುತ್ತದೆ. ಡಾ ಸುನೀಲ ಪರೀಟ ಅವರ ಇಂಥ ಎರಡು ಕೃತಿಗಳು ಸಾಹಿತ್ಯ ಜಗತ್ತಿಗೆ ಹೊಸ ಬೆರಗನ್ನು ಮೂಡಿಸುತ್ತದೆ ಎಂದು ವರ್ಣಿಸಿದರು.

ಡಾ. ಸುನೀಲ ಪರೀಟ ಅವರು ತಮ್ಮ ಕೃತಿಗಳ ಕುರಿತು ಮಾತನಾಡುತ್ತಾ ಸಾಹಿತ್ಯವು ಸಮಾಜಕ್ಕೆ ದಾರಿ ತೋರುವ ಒಂದು ಮಾಧ್ಯಮವಾಗಿದೆ. ಸಾಹಿತ್ಯ ಯಾವತ್ತೂ ಈ ಸಮಾಜಕ್ಕೆ ಈ ದೇಶಕ್ಕೆ ಒಳಿತನ್ನು ಬಯಸುತ್ತದೆ. ನಾವು ಮಾಡಿದ ತಪ್ಪನ್ನು ಮಕ್ಕಳು ಮಾಡುತ್ತಾರೆ, ಆದ್ದರಿಂದ ಮಕ್ಕಳ ಕೈಯಲ್ಲಿ ಮೊಬೈಲ್ ಅನ್ನು ನೀಡುವ ಬದಲು ಇಂತಹ ಕೃತಿಗಳನ್ನು ನೀಡಿ ಮಕ್ಕಳಿಗೆ ಒಳ್ಳೇ ಮಾರ್ಗದರ್ಶನವನ್ನು ಮಾಡುವಂತ ಇವತ್ತು ಸಂದರ್ಭ ಬಂದು ಒದಗಿದೆ. ಇವತ್ತು ಸಾಹಿತ್ಯ ಹಾಗೂ ಸಾಹಿತ್ಯಕಾರರು ಕಷ್ಟದಲ್ಲಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿ ಸಮಾಜ ನಿರಂತರವಾಗಿ ಸಾಹಿತ್ಯಕ್ಕೆ ಪ್ರೊತ್ಸಾಹಿಸಿ ಸಹಕರಿಸುವುದು ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಕನ್ನಡ ಉಪನ್ಯಾಸಕ ಡಾ. ಯು. ಎನ್. ಸಂಗನಾಳಮಠ ಅವರು ಮಾತನಾಡುತ್ತಾ ಉದಯೋನ್ಮುಖ ಸಾಹಿತಿಗಳಿಗೆ ಹಿರಿಯ ಸಾಹಿತಿಗಳು ಮಾರ್ಗದರ್ಶನ ಮಾಡಬೇಕು ಸಾಹಿತ್ಯವು ಯಾವತ್ತೂ ಬೆಳೆಯುತ್ತಿರಬೇಕು ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗಗಳು ಮೇಲಿಂದ ಮೇಲೆ ಆಗುತ್ತಿರಬೇಕು. ನಾವು ಇದ್ದರೂ ಇರದಿದ್ದರೂ ಸಾಹಿತ್ಯವು ಯಾವತ್ತೂ ಈ ಸಮಾಜದಲ್ಲಿ ಉಳಿಯುತ್ತದೆ. ಇವತ್ತಿನ ಎರಡು ಕೃತಿಗಳು ನಮ್ಮ ಸಾಹಿತ್ಯ ಜಗತ್ತಿನಲ್ಲಿ ಶಾಶ್ವತವಾಗಿ ಹೊಳೆಯುತ್ತಿರುತ್ತವೆ ಏಕೆಂದರೆ ಈ ಎರಡು ಕೃತಿಗಳು ವಿಷಯ ವಸ್ತು ಇವತ್ತಿನ ಸಮಾಜಕ್ಕೆ ಅತ್ಯವಶ್ಯಕವಾಗಿವೆ. ಇವತ್ತಿನ ಮಕ್ಕಳಿಗೆ ಮಕ್ಕಳ ಸಾಹಿತ್ಯವನ್ನು ಪರಿಚಯಿಸುವ ಹಾಗೂ ಕಷ್ಟದಲ್ಲಿರುವ ರೈತರ ಕುರಿತು ಬೆಳಕನ್ನು ಚೆಲ್ಲುವ ಕೃತಿಗಳು ಅತ್ಯವಶ್ಯಕವಾಗಿವೆ. ಸಮಯವು ಯಾವತ್ತು ನಿಲ್ಲುವುದಿಲ್ಲ ಹಾಗೆಯೇ ಸಾಹಿತ್ಯವು ಬಹಳ ಅವಧಿ ವರೆಗೆ ತನ್ನ ಒಂದೇ ರೂಪದಲ್ಲಿ ಉಳಿಯುವುದಿಲ್ಲ. ಉದ್ಯೋನ್ಮುಖ ಸಾಹಿತಿಗಳಿಂದ ಸಾಹಿತಿಗಳಿಂದ ಈ ಸಮಾಜಕ್ಕೆ ಒಳ್ಳೆ ಮಾರ್ಗದರ್ಶನ ಬಯಸುವ ನಾವೆಲ್ಲರೂ ಇಂತಹ ಕೃತಿಗಳಿಗೆ ಹೆಚ್ಚು ಮಹತ್ವವನ್ನು ನೀಡಿ ಪ್ರೇರೇಪಿಸಬೇಕಾಗಿದೆೆ ಎಂದು ಅಭಿಪ್ರಾಯಪಟ್ಟರಲ್ಲದೇ ಶಿವಾ ಅಪ್ ಸೆಟ್ ಪ್ರಿಂಟಿಂಗ್ ಮತ್ತು ಪಬ್ಲಿಷರ್ಸ್ ಬೆಳಗಾವಿಯ ಮಾಲೀಕರಾದ ಡಾ. ಶಿವು ನಂದಗಾಂವ ಅವರು ಈ ಎರಡು ಕೃತಿಗಳನ್ನು ಪ್ರಕಟಿಸಿ ಅಚ್ಚುಕಟ್ಟಾಗಿ ಎಲ್ಲಾ ಸಾಹಿತ್ಯವನ್ನು ತಯಾರಿಸಿ ಪುಸ್ತಕ ಪ್ರದರ್ಶನಕ್ಕೆ ಹಾಗೂ ಬಿಡುಗಡೆಗೆ ಸಹಕರಿಸಿ ಇಂಥ ಸಮಾಜಮುಖಿ ಕೃತಿಗಳನ್ನು ಪ್ರಕಟಿಸುವಲ್ಲಿ ನಮಗೆ ಹೆಮ್ಮೆ ಎನಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಮ್ಮ ಅನ್ನದಾತ ಕವನ ಸಂಕಲನದ ಕವಿ ಮನಸುಗಳಿಗೆ ಪ್ರಶಸ್ತಿ ಪತ್ರ ಹಾಗೂ ಕೃತಿಗಳನ್ನು ಸಮರ್ಪಿಸಿ ಗೌರವಿಸಲಾಯಿತು ಕಾರ್ಯಯಕ್ರಮದಲ್ಲಿ ಬಾಳಗೌಡ ದೊಡಬಂಗಿ, ಶಿವಾನಂದ ತಲ್ಲೂರ, ದೀಪಾ ರಾಗಿ, ಬಿ ಬಿ ಮಠಪತಿ, ರುದ್ರಮ್ಮಾ ಪಾಟೀಲ, ಶೋಭಾ ಕತ್ತಿ, ಜ್ಯೋತಿ ಸಿ. ಎಂ., ಸುಮಿತ್ರಾ ಕರವಿನಕೊಪ್ಪ, ಮಂಜುಳಾ ಶೆಟ್ಟರ, ರಾಜು ಹಕ್ಕಿ, ಶಿವನಗೌಡ ಪಾಟೀಲ, ಮಡಿವಾಳಮ್ಮ ಪೂಜಾರಿ, ಸುಭಾಷ ತಾಳೂಕರ, ಸುನೀತಾ ಶಿವಯೋಗಿ, ಡಾ. ವಸುಧಾ ಕಾಮತ ಅಲ್ಲದೇ ರಾಜ್ಯದ ಮೂಲೆ ಮೂಲೆಯಿಂದಲು ಸಾಹಿತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಅನುರಾಧಾ ಕೋಲಕಾರ ಗಣೇಶ ಸ್ತುತಿ ಹಾಗೂ ಶಾರದಾ ಮಾತೆಯ ಪ್ರಾರ್ಥನೆಯನ್ನು ಮಾಡಿದಳು. ಶ್ರೀಮತಿ ಎಂ.ಎ. ದೇಸಾಯಿ ಅವರು ನಾಡಗೀತೆಯನ್ನು ಹಾಡಿದರು. ಕುಮಾರಿ ಅನುರಾಧಾ ಹಾಗೂ ಅಶ್ವಿನಿ ಬಾಗನವರ ವಿದ್ಯಾರ್ಥಿನಿಯರು ರೈತ ಗೀತೆಯನ್ನು ಹಾಡಿದರು. ಮೊದಲಿಗೆ ಡಾ. ಸುನೀಲ ಪರೀಟ ಸ್ವಾಗತಿಸಿದರು. ಎಂ. ವ್ಯ. ಮೆಣಸಿನಕಾಯಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕೊನೆಗೆ ಶ್ರೀಮತಿ ಸುಮನ ಪರೀಟ ವಂದಿಸಿದರು.ಮಾಹಿತಿ ವರದಿ: ಆಕಾಶ್ ಅರವಿಂದ ಥಬಾಜಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ, ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆಬೆಳಗಾವಿ 9448634208 / 9035419700