ಡೈಲಿ ವಾರ್ತೆ: 20/ಜೂ./2024

ಅಯೋಧ್ಯೆ: ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಭದ್ರತಾ ಸಿಬ್ಬಂದಿ ದುರ್ಮರಣ

ಅಯೋಧ್ಯೆ: ರಾಮಜನ್ಮಭೂಮಿ ಕಾಂಪ್ಲೆಕ್ಸ್ ನಲ್ಲಿ ಎಸ್‍ಎಸ್‍ಎಫ್ ಯೋಧರೊಬ್ಬರು (ಭದ್ರತಾ ಸಿಬ್ಬಂದಿ) ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.

ಮೃತರನ್ನು ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಶತ್ರುಘ್ನ ವಿಶ್ವಕರ್ಮ ಅವರು 2019 ರ ಬ್ಯಾಚ್‍ನವರಾಗಿದ್ದು, ಅಂಬೇಡ್ಕರ್ ನಗರದ ಸಮ್ಮನಪುರ ಪೊಲೀಸ್ ಠಾಣೆಯ ಕಾಜಪುರ ಗ್ರಾಮದ ನಿವಾಸಿ.

ಈ ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮಾಹಿತಿ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ರಾಮಮಂದಿರದಿಂದ ಕೇವಲ 150 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ರಾಮಜನ್ಮಭೂಮಿಯ ಭದ್ರತೆಗೆ ಎಸ್‍ಎಸ್‍ಎಫ್ ಯೋಧರನ್ನು ನಿಯೋಜಿಸಲಾಗಿತ್ತು. ಘಟನೆ ನಡೆಯುತ್ತಿದ್ದಂತೆಯೇ ಶತ್ರುಘ್ನ ವಿಶ್ವಕರ್ಮ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಟ್ರಾಮಾ ಸೆಂಟರ್‍ಗೆ ಕಳುಹಿಸಲಾಯಿತು. ಆದರೆ ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಮೃತ ಯೋಧನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಕುಟುಂಬಸ್ಥರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಇದು ಆಕಸ್ಮಿಕವಾಗಿ ಗುಂಡಿನ ದಾಳಿಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಅಲ್ಲದೇ ಯೋಧನ ತಲೆಗೆ ಮುಂಭಾಗದಿಂದ ಗುಂಡು ಹಾರಿಸಿದ್ದು ಹೇಗೆ ಎಂದು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಘಟನೆಗೂ ಮುನ್ನ ಶತ್ರುಘ್ನ ಅವರು ಮೊಬೈಲ್ ನೋಡುತ್ತಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.