ಡೈಲಿ ವಾರ್ತೆ: 20/ಜೂ./2024

ಬೆಳ್ತಂಗಡಿ: ದಲಿತ ಮುಖಂಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ, ಚಂದು ಎಲ್. ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ (52) ಅವರು ಅಲ್ಪ ಕಾಲದ‌ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂ.19 ರಂದು ರಾತ್ರಿ ನಿಧನರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಚಂದು ಎಲ್. ಅವರು ಬೆಳ್ತಂಗಡಿ ತಾ.ಪಂ.ಉಪಾಧ್ಯಕ್ಷರಾಗಿ, ಗೇರು ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಡಿ.ಸಿ. ಮನ್ನಾ ಜಮೀನಿಗಾಗಿನ ಹೋರಾಟ, ನಿಡ್ಲೆ ದೈವಸ್ಥಾನದ ಸಾರ್ವಜನಿಕ ಊಟದ ಪಂಕ್ತಿಯಿಂದ ದಲಿತ ಯುವತಿಯನ್ನು ಬಲಾತ್ಕಾರವಾಗಿ ಎಬ್ಬಿಸಿದ ಘಟನೆ ಮುಂದಿಟ್ಟು ನಡೆದ ಹೋರಾಟಗಳ ನೇತೃತ್ವವನ್ನು ವಹಿಸಿದ್ದರು. ಜತೆಗೆ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ನೂರಾರು ದಲಿತ, ಸಾಮಾಜಿಕ ಹೋರಾಟಗಳಿಗೆ ಮುಂಚೂಣಿ ನಾಯಕತ್ವ ವಹಿಸಿದ್ದರು.