ಡೈಲಿ ವಾರ್ತೆ: 22/ಜೂ./2024

ನಿರ್ಮಾಣ ಹಂತದಲ್ಲಿದ್ದ YSR ಕಾಂಗ್ರೆಸ್‌ ಪಕ್ಷದ ಕಚೇರಿ ಧ್ವಂಸ – ಸೇಡಿನ ರಾಜಕಾರಣ ಎಂದು ಆಕ್ರೋಶ

ಆಂಧ್ರಪ್ರದೇಶ: ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯನ್ನು ಅಕ್ರಮ ನಿರ್ಮಾಣ ಆರೋಪದ ಮೇಲೆ ಪುರಸಭೆ ಅಧಿಕಾರಿಗಳು ಶನಿವಾರ ಮುಂಜಾನೆ ಕೆಡವಿದ್ದಾರೆ.

ಮಂಗಳಗಿರಿ-ತಡೆಪಲ್ಲಿ ಪುರಸಭೆ ಅಧಿಕಾರಿಗಳ ಸೂಚನೆ ಮೇರೆಗೆ ಶನಿವಾರ ಮುಂಜಾನೆ ಸುಮಾರು 5:30 ರ ಸುಮಾರಿಗೆ ನಾಲ್ಕು ಐದು ಬುಲ್ಡೋಜರ್‌ಗಳಿಂದ ನಿರ್ಮಾಣಗೊಳ್ಳುತಿದ್ದ ನೂತನ ಕಚೇರಿಯ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ.

ಈ ಕುರಿತು X ನಲ್ಲಿ ಪ್ರತಿಕ್ರಿಯೆ ನೀಡಿರುವ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಆಂಧ್ರದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸರಕಾರದ ಕುಮ್ಮಕ್ಕಿನಿಂದ ನಮ್ಮ ಕಚೇರಿಯ ಕಟ್ಟಡವನ್ನು ಕೆಡವಲಾಗಿದೆ, ರಾಜ್ಯದಲ್ಲಿ ನಾಯ್ಡು ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಸರಕಾರಿ ಜಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡದ ವಿರುದ್ಧ ಸಿಆರ್‌ಡಿಎ ನೊಟೀಸ್ ನೀಡಿತ್ತು, ಅಲ್ಲದೆ ಜಗನ್ ಶುಕ್ರವಾರ ಸಿಆರ್‌ಡಿಎ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೋರೆ ಹೋಗಿದ್ದರು ಜೊತೆಗೆ ಹೈಕೋರ್ಟ್ ಕೂಡಾ ಕಟ್ಟಡ ಕೆಡವದಂತೆ ತಡೆ ನೀಡಿತ್ತು ಇದರ ನಡುವೆ ರಾಜ್ಯ ಸರಕಾರ ತನ್ನ ಸರ್ವಾಧಿಕಾರಿ ಧೋರಣೆ ನಡೆಸಿ ಬೆಳಗಾಗುವುದರೊಳಗೆ ಕಟ್ಟಡವನ್ನು ನೆಲಸಮಗೊಳಿಸಿದೆ ಎಂದು ಕಿಡಿಕಾರಿದ್ದಾರೆ.
ಸಿಆರ್‌ಡಿಎ ಮತ್ತು ಎಂಟಿಎಂಸಿ ಅಧಿಕಾರಿಗಳ ಪ್ರಕಾರ, ನೀರಾವರಿ ಇಲಾಖೆಯ ಜಮೀನಿನಲ್ಲಿ ವೈಎಸ್‌ಆರ್‌ಸಿಪಿ ಕೇಂದ್ರ ಕಚೇರಿ ನಿರ್ಮಿಸಲು ಹೊರಟಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ಬೋಟ್‌ಯಾರ್ಡ್‌ಗಾಗಿ ಬಳಸಲಾಗುತ್ತಿದ್ದ ಭೂಮಿಯನ್ನು ಕಡಿಮೆ ಮೊತ್ತಕ್ಕೆ ಗುತ್ತಿಗೆಗೆ ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಒಂದು ಕಡೆಯಾದರೆ. ಸಿಆರ್‌ಡಿಎ ಮತ್ತು ಎಂಟಿಎಂಸಿಯಿಂದ ಅನುಮತಿ ಪಡೆಯದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.