ಡೈಲಿ ವಾರ್ತೆ: 25/ಜೂ./2024

ರಾಜ್ಯಾದ್ಯಂತ ಕಬಾಬ್‌, ಫಿಶ್‌, ಚಿಕನ್‌ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧಿಸಿದ ಸರ್ಕಾರ

ಬೆಂಗಳೂರು: ರಾಜ್ಯಾದ್ಯಂತ ಕಬಾಬ್‌, ಫಿಶ್‌, ಚಿಕನ್‌ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕದ 36 ಕಡೆ ಕಬಾಬ್ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿತ್ತು. ಅದರಲ್ಲಿ ಯಲ್ಲೋ ಹಾಗೂ ಕಾರ್ಮೋಸಿನ್ ಮಾದರಿ ಕಂಡುಬಂದಿದೆ. ಇದರಿಂದ ಆಹಾರದಲ್ಲಿ ಕೃತಕ ಬಣ್ಣ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತ ಈ ತೀರ್ಮಾನ ಕೈಗೊಂಡಿದೆ. ಈ ಹಿಂದೆ ಕಾಟನ್ ಕ್ಯಾಂಡಿ, ಗೋಬಿಗೆ ಕೃತಕ ಬಣ್ಣ ಬಳಕೆ ನಿರ್ಬಂಧಿಸಲಾಗಿತ್ತು. ಇದೀಗ ಕಬಾಬ್‌, ಫಿಶ್‌, ಚಿಕನ್‌ಗೆ ಕೃತಕ ಬಣ್ಣ ಬಳಕೆ ಬ್ಯಾನ್ ಮಾಡಲಾಗಿದೆ.

ಕೃತಕ ಬಣ್ಣ ನಿಷೇಧಕ್ಕೆ ಕಾರಣವೇನು?
ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಹಿಂದೆ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿತ್ತು.

ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನ FSSAI ಸಂಗ್ರಹಿಸಿದ್ದು, ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಾದರಿ ಟೆಸ್ಟ್​​ ಮಾಡಲಾಗಿದೆ. ಟೆಸ್ಟಿಂಗ್ ವೇಳೆ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಇರೋದು ಪತ್ತೆಯಾಗಿತ್ತು.

ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್‌-ಬಿ ರಾಸಾಯನಿಕ ಅಂಶ ಪತ್ತೆಯಾಗಿದ್ರೆ, ಇತ್ತ ಗೋಬಿ ಮಂಚೂರಿಯಲ್ಲಿ‌ ಸನ್‌ಸೆಟ್‌ ಯೆಲ್ಲೊ‌ ಬಣ್ಣ ಮತ್ತು ಟಾಟ್ರ್ರಾಜಿನ್‌ ಪತ್ತೆಯಾಗಿದೆ. ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್‌-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್‌ಸೆಟ್‌ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರ್ರಾಜಿನ್‌’ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಲರ್ ಬಳಕೆಯನ್ನು ನಿಷೇಧಿಸಿದೆ.

ಏನಿದು ರೋಡ್​ಮೈನ್ ಬಿ. ಪರಿಣಾಮವೇನು?
ರೋಡ್​ಮೈನ್ ಬಿ ರಾಸಾಯನಿಕವನ್ನು, ಜವಳಿ, ಕಾಗದ, ಚರ್ಮದ ಉದ್ಯಮಗಳಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕಾಗಿ ಬಳಸಲಾಗುತ್ತೆ. ಈ ರಾಸಾಯನಿಕ ಆಹಾರದ ಮೂಲಕ ದೇಹ ಸೇರಿದ್ರೆ, ಕ್ಯಾನ್ಸರ್ ಖಾಯಿಲೆಗೆ ತುತ್ತಾಗುವ ಸಂಭವವಿದೆ. ಇದು ಕಾಟನ್ ಕ್ಯಾಂಡಿಯಲ್ಲಿ ಮಾತ್ರವಲ್ಲ, ಸಿಹಿ ತಿಂಡಿಗಳಾದ ಬಣ್ಣದ ಮಿಠಾಯಿಗಳಲ್ಲೂ ಇದು ಕಂಡು ಬರುತ್ತೆ. ಇದು ನಿರಂತರವಾಗಿ ದೇಹ ಸೇರಿದ್ರೆ ಮೆದುಳಿಗೂ ತುಂಬಾ ಎಫೆಕ್ಟ್ ಆಗುವ ಸಾಧ್ಯತೆಯಿದೆ.