ಡೈಲಿ ವಾರ್ತೆ: ಫೆ./28/2026

ಬಾಳೆಬರೆ ಘಾಟಿಯಲ್ಲಿ ಭೀಕರ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್

ಸಿದ್ದಾಪುರ, ಫೆ.28: ಸಿದ್ದಾಪುರ ಸಮೀಪದ ಬಾಳೆಬರೆ ಘಾಟಿಯಲ್ಲಿ ಶನಿವಾರ ಮಧ್ಯಾಹ್ನ ಖಾಸಗಿ ಬಸ್‌ವೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಸಮಯಕ್ಕೆ ಮುನ್ನ ಇಳಿದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕುಂದಾಪುರದಿಂದ ಸಾಗರದತ್ತ ಹೊರಟಿದ್ದ ‘ಶ್ರೀ ದುರ್ಗಾಂಬ’ ಹೆಸರಿನ ಬಸ್ ಸಿದ್ದಾಪುರ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆ ಬಾಳೆಬರೆ ಘಾಟಿ ಪ್ರದೇಶದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಚಾಲಕ ಮತ್ತು ಸಿಬ್ಬಂದಿ ಬಸ್‌ನ್ನು ತಕ್ಷಣ ನಿಲ್ಲಿಸಿ ಪರಿಶೀಲನೆ ನಡೆಸುವಷ್ಟರಲ್ಲಿ ವಾಹನದ ಒಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಕವಾಗಿ ಹಬ್ಬಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಘಟನೆಯಿಂದಾಗಿ ಕೆಲವು ಹೊತ್ತಿನ ಕಾಲ ಘಾಟಿ ಪ್ರದೇಶದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಇತ್ತೀಚಿನ ದಿನಗಳಲ್ಲಿ ಬಸ್, ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಾಹನಗಳ ನಿಯಮಿತ ತಪಾಸಣೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.