ಡೈಲಿ ವಾರ್ತೆ: 30/ಜೂ./2024

ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.

ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

 ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಯಾಸೀರ್ ಅವರ ಪುಟ್ಟ ಮಗಳು ನಾಳೆ ಶಾಲೆಗೆ ರಜೆ ಇದೆಯಾ? ಎಂದು ಪ್ರಶ್ನಿಸಿದಾಗ ನಗು ನಗುತ್ತಲೆ  ಇಲ್ಲ ಎಂದು ಉತ್ತರಿಸಿದರು.

 ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ  ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.