ಡೈಲಿ ವಾರ್ತೆ: ಫೆ./20/2026

ಬೆಳ್ತಂಗಡಿ| ಚೆಂಡಿನಾಕಾರದ ಸ್ಫೋಟಕದಿಂದ ಆಟವಾಡಿದ ಬಾಲಕರು: ಬ್ಯಾಟ್ನಿಂದ ಹೊಡೆದ ಕ್ಷಣದಲ್ಲಿ ಸ್ಫೋಟ – ಬಾಲಕ ಗಾಯ.!

ಬೆಳ್ತಂಗಡಿ, ಫೆ.20: ತಾಲೂಕಿನ ಬಂದಾರು ಗ್ರಾಮದಲ್ಲಿ ಚೆಂಡಿನ ಆಕಾರದ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಓರ್ವ ಬಾಲಕ ಗಾಯಗೊಂಡಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡ ಬಾಲಕನನ್ನು ಅಭೀಶ್ ಎಂದು ಗುರುತಿಸಲಾಗಿದ್ದು, ಅವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಪ್ರಕಾರ, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ವಿವರ:
ಅಭೀಶ್ ತನ್ನ ಮನೆಯ ಅಂಗಳದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಚೆಂಡಿನಾಕಾರದ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಬಾಲ್ ಎಂದು ಭಾವಿಸಿ ಮಕ್ಕಳು ಅದರಿಂದ ಕ್ರಿಕೆಟ್ ಆಟವಾಡಲು ಆರಂಭಿಸಿದ್ದಾರೆ. ಓರ್ವ ಬಾಲಕ ಅದನ್ನು ಬೌಲ್ ಮಾಡಿದ್ದು, ಅಭೀಶ್ ಬ್ಯಾಟ್‌ನಿಂದ ಹೊಡೆದ ಕ್ಷಣದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಅಭೀಶ್‌ಗೆ ಗಾಯಗಳಾಗಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಾಡು ಹಂದಿ ಬೇಟೆಗೆ ಬಳಸುವ ಸ್ಫೋಟಕ ವಸ್ತುವನ್ನು ಯಾರೋ ಅಲ್ಲಿ ಇಟ್ಟಿರುವ ಸಾಧ್ಯತೆ ವ್ಯಕ್ತವಾಗಿದೆ.

ಘಟನೆಯ ಗಂಭೀರತೆಯನ್ನು ಮನಗಂಡು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 9(B), 1(b) ಸ್ಫೋಟಕಗಳ ಕಾಯ್ದೆ ಹಾಗೂ 125(A) ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ. ಸ್ಫೋಟಕ ವಸ್ತು ಹೇಗೆ ಅಲ್ಲಿ ಬಂತು, ಯಾರು ಇಟ್ಟಿದ್ದರು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಬೇಟೆಗಾಗಿ ಇಂತಹ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಬಳಕೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕರು ಅನುಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.