

ಡೈಲಿ ವಾರ್ತೆ: ಫೆ./20/2026

“ನೀನು ಬೇಡ, ಮೊದಲ ಹೆಂಡತಿ ಬೇಕು” ಎಂದು ಪತ್ನಿಗೆ ಕಲ್ಲು,ರಾಡ್‌ನಿಂದ ಹಲ್ಲೆ: ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲು

ಬ್ರಹ್ಮಾವರ, ಫೆ. 20: ದಾಂಪತ್ಯ ಕಲಹದ ಹಿನ್ನೆಲೆ ಪತಿಯೊರ್ವ ಪತ್ನಿಯ ಮೇಲೆ ಕಲ್ಲು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ವಾರಂಬಳ್ಳಿ ಗ್ರಾಮದ ರಿಹಾನ (40) ಅವರು ನೀಡಿದ ದೂರಿನಂತೆ, ಅವರು 11/06/2023 ರಂದು ಆರೋಪಿತ ಮೊಹಮ್ಮದ್ ಇಕ್ಬಾಲ್ ಅವರೊಂದಿಗೆ ವಿವಾಹವಾಗಿದ್ದು, ವಾರಂಬಳ್ಳಿ ಗ್ರಾಮದ ಸ್ವರ್ಣ ರೆಸಿಡೆನ್ಸಿ, ರೂಂ ನಂ. 101ರಲ್ಲಿ ಪತಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು.
ಮದುವೆಯಾಗಿ ಸುಮಾರು 2½ ವರ್ಷಗಳ ಬಳಿಕ ಪತಿ ಸರಿಯಾಗಿ ನೋಡಿಕೊಳ್ಳದೆ, ಅವಾಚ್ಯವಾಗಿ ಬೈದು ದೈಹಿಕ ಹಿಂಸೆ ನೀಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಿನಾಂಕ 08/02/2026 ರಂದು ಆರೋಪಿಯು ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಪಿರ್ಯಾದಿದಾರರು ಅವರು ಕೆಲಸ ಮಾಡುತ್ತಿದ್ದ ವಾರಂಬಳ್ಳಿ ಗ್ರಾಮದ ಧರ್ಮಾವರಂ ಸಮೀಪದ ಗ್ಯಾರೇಜ್‌ಗೆ ತೆರಳಿ ವಿಚಾರಿಸಿದಾಗ, “ನಾನು ಮನೆಗೆ ಬರುವುದಿಲ್ಲ” ಎಂದು ಹೇಳಿ ಗಲಾಟೆ ನಡೆಸಿದನೆಂದು ತಿಳಿದು ಬಂದಿದೆ. ಅದೇ ದಿನ ಸಂಜೆ ಮನೆಗೆ ಬಂದ ಆರೋಪಿಯು “ಗ್ಯಾರೇಜ್‌ಗೆ ಯಾಕೆ ಬಂದೆ?” ಎಂದು ಪ್ರಶ್ನಿಸಿ ಪತ್ನಿಗೆ ಕೈಯಿಂದ ಹೊಡೆದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಮತ್ತೊಮ್ಮೆ ನಾಲ್ಕು ದಿನ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ, 19/02/2026 ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ರಿಹಾನ ಗ್ಯಾರೇಜ್‌ಗೆ ತೆರಳಿ ಮನೆಗೆ ಬರುವಂತೆ ಮನವಿ ಮಾಡಿದಾಗ, ಆರೋಪಿಯು “ನೀನು ನನಗೆ ಬೇಡ, ನನಗೆ ಮೊದಲ ಹೆಂಡತಿ ಬೇಕು, ನೀನು ಬೇರೆ ಮದುವೆಯಾಗು” ಎಂದು ಹೇಳಿದನೆಂದು ಆರೋಪಿಸಲಾಗಿದೆ. ಇದಕ್ಕೆ ಪತ್ನಿ ಸಂಸಾರ ನಿಮ್ಮೊಂದಿಗೇ ಮಾಡುವುದಾಗಿ ಹೇಳಿದಾಗ, ಕಲ್ಲಿನಿಂದ ಹಣೆಗೆ ಹೊಡೆದು, ಬಳಿಕ ಅಲ್ಲಿದ್ದ ರಾಡ್‌ನಿಂದ ಮೈಕೈ ಹಾಗೂ ತಲೆಗೆ ಹಲ್ಲೆ ನಡೆಸಿ, ಹೊಟ್ಟೆಗೆ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ರಿಹಾನ ಅವರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2026ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 85, 115(2), 118(1), 352, 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.