

ಡೈಲಿ ವಾರ್ತೆ: ಫೆ./20/2026

ಮಂಗಳೂರು| BSNL ಕಚೇರಿಯಲ್ಲೇ 70 ಲಕ್ಷದ ಕಾಪರ್ ಕೇಬಲ್ ಕಳ್ಳತನ: ಮೂವರು ಅಧಿಕಾರಿಗಳ ಬಂಧನ

ಮಂಗಳೂರು, ಫೆ.20: ಸರ್ಕಾರಿ ಸಂಸ್ಥೆಯಾದ ಭಾರತ್ ಸಂಚರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಕಚೇರಿಯಲ್ಲೇ ಸುಮಾರು 70 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಕಳ್ಳತನ ನಡೆದಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಅಧಿಕಾರಿಗಳು ತಕ್ಷಣದ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಿಎಸ್‌ಎನ್‌ಎಲ್ ಅಸಿಸ್ಟೆಂಟ್ ಆಫೀಸ್ ಸೂಪರಿಂಟೆಂಡೆಂಟ್ ತನ್ವೀರ್ ಪಾಷಾ (50), ಟೆಲಿಕಾಂ ಟೆಕ್ನಿಶಿಯನ್ ಕೆ.ಕೆ. ಚಾಮಿ (59) ಹಾಗೂ ಎಲ್‌ಅಂಡ್‌ಟಿ ಕಂಪನಿಯ ಕೇಬಲ್ ಜಾಯಿಂಟರ್ ಡಿ. ಮಂಜುನಾಥ್ ಎಂದು ಗುರುತಿಸಲಾಗಿದೆ.
ಅಧಿಕಾರಿಗಳೇ ಸಂಚು ರೂಪಿಸಿ ಕಚೇರಿಯಲ್ಲಿದ್ದ ಕಾಪರ್ ಕೇಬಲ್ ಅನ್ನು ಹಂತ ಹಂತವಾಗಿ ಕಳವು ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳಿಂದ ಸುಮಾರು 2.5 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಹಾಗೂ 10 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ವಸ್ತುಗಳ ಮತ್ತು ಹಣದ ಹಾದಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕ ಸೇವೆ ನೀಡುವ ಸಂಸ್ಥೆಯಲ್ಲೇ ವಿಶ್ವಾಸಘಾತ ನಡೆದಿರುವುದು ಗಂಭೀರ ವಿಷಯವಾಗಿದ್ದು, ಅಧಿಕಾರಿಗಳೇ ಕಳ್ಳತನದಲ್ಲಿ ತೊಡಗಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. “ಉಂಡ ಮನೆಗೇ ಕನ್ನ ಹಾಕಿದ” ಆರೋಪಿಗಳು ಇದೀಗ ಕಂಬಿ ಹಿಂದೆ ಸೇರಿದ್ದು, ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಆಸ್ತಿ-ಪಾಸ್ತಿಗಳ ಪರಿಶೀಲನೆ ಸಹ ನಡೆಯುತ್ತಿದೆ. ಪ್ರಕರಣದ ಸಂಪೂರ್ಣ ತನಿಖೆ ಬಳಿಕ ಇನ್ನಷ್ಟು ವಿವರ ಬಹಿರಂಗವಾಗುವ ಸಾಧ್ಯತೆ ಇದೆ.