ಡೈಲಿ ವಾರ್ತೆ: ಫೆ./20/2026

ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಶಂಕಿತ ಮಾಂಸ, ಜಿಂಕೆ ಕೊಬ್ಬು, ಎರಡು ಏರ್‌ಗನ್‌ ವಶ! ಆರೋಪಿಗಾಗಿ ತೀವ್ರ ಶೋಧ!

ಭಟ್ಕಳ (ಉತ್ತರ ಕನ್ನಡ):ಭಟ್ಕಳ ತಾಲೂಕಿನ ಹುರುಳಿಸಾಲ ಪ್ರದೇಶದಲ್ಲಿ ಕಾಡುಪ್ರಾಣಿ ಹತ್ಯೆ ನಡೆದಿರಬಹುದೆಂಬ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 21 ಕೆಜಿ ಶಂಕಿತ ಮಾಂಸ, ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್‌ಗಳನ್ನು ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ್ದ ಮಾಂಸ ಮೇಲ್ನೋಟಕ್ಕೆ ಕಾಡುಪ್ರಾಣಿಗೆ ಸೇರಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮನೆ ಸಮೀಪದ ಪಾಳುಬಿದ್ದ ಬಾವಿಯಲ್ಲಿ ಪ್ರಾಣಿಯ ಅವಶೇಷಗಳಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಅವುಗಳನ್ನು ಹೊರತೆಗೆದು ಪರಿಶೀಲನೆ ನಡೆಸಲಾಗಿದೆ.

ಕಾರ್ಯಾಚರಣೆ ವೇಳೆ ಮನೆ ಒಳಗೆ ಪ್ರವೇಶಿಸಲು ಅಧಿಕಾರಿಗಳು ಪ್ರಯತ್ನಿಸಿದಾಗ ಆರಂಭದಲ್ಲಿ ಸಹಕಾರ ದೊರಕಲಿಲ್ಲ ಎಂದು ಮೂಲಗಳು ತಿಳಿಸಿವೆ. ಸುಮಾರು ಆರು ಗಂಟೆಗಳ ನಿರೀಕ್ಷೆಯ ನಂತರ ಅಧಿಕಾರಿಗಳಿಗೆ ಮನೆ ಪರಿಶೀಲನೆಗೆ ಅವಕಾಶ ಸಿಕ್ಕಿದ್ದು, ಬಳಿಕ ಶಂಕಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ವಲಯಾಧಿಕಾರಿ (RFO) ವಿಶ್ವನಾಥ ಅವರು, “ಪತ್ತೆಯಾದ ಮಾಂಸವು ಕಾಡುಪ್ರಾಣಿಗೆ ಸೇರಿರಬಹುದೆಂಬ ಶಂಕೆ ಇದೆ. ದೃಢೀಕರಣಕ್ಕಾಗಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ,” ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿ ಜಾಫರ್ (ಬ್ರಹ್ಮಾವರ ಮೂಲದ) ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಸಿಪಿಐ ದಿವಾಕರ ಪಿ.ಎಂ., ಪಿಎಸ್‌ಐ ನವೀನ್ ನಾಯ್ಕ, ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ, ಡಿಆರ್‌ಒಎಫ್ ಸಿಬ್ಬಂದಿಗಳಾದ ಮಾರುತಿ, ಸಂದೀಪ್ ಹಾಗೂ ಧನಂಜಯ ಮೊಗೇರ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.