ಡೈಲಿ ವಾರ್ತೆ: 05/ಜುಲೈ /2024
ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಕೋಚ್ ಬಸ್ ಪಲ್ಟಿ – ಚಾಲಕ ಸ್ಥಳದಲ್ಲೇ ಸಾವು
ಕುಷ್ಟಗಿ: ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ, ಚಾಲಕ ಮೃತಪಟ್ಟ ಘಟನೆ ಕುಷ್ಟಗಿ- ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 50ರ ಪೆಟ್ರೋಲ್ ಬಂಕ್ ಸಮೀಪ ಗುರುವಾರ ತಡರಾತ್ರಿ ನಡೆದಿದೆ.
ಮೃತಪಟ್ಟ ಬಸ್ ಚಾಲಕ
ಬಾಗಲಕೋಟೆ ಜಿಲ್ಲೆಯ ಅರಕೇರಿ ಗ್ರಾಮದ ಲಕ್ಷ್ಮಣ (32) ಎಂದು ಗುರುತಿಸಲಾಗಿದೆ.
ಈ ಬಸ್ಸಿನಲ್ಲಿದ್ದ 22 ಪ್ರಯಾಣಿಕರಿಗೆ ಗಾಯವಾಗಿದೆ.
ಬಸ್ ಬಾಗಲಕೋಟೆಯಿಂದ ಬೆಂಗಳೂರಿಗೆ ತೆರಳುವಾಗ ಕುಷ್ಟಗಿಯಿಂದ ಸುಮಾರು 3 ಕಿ.ಮೀ. ಅಂತರದ ಪೆಟ್ರೋಲ್ ಬಂಕ್ (ತಾಯಮ್ಮನ ಗುಡಿ ಬಳಿ) ಜು.4 ರ ಗುರುವಾರ ತಡರಾತ್ರಿ 11: 30ರ ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.
ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ ಚಾಲನೆಯಿಂದ ಬಸ್ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಲೋಹದ ತಡೆ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ.
ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಬಸ್ ನಲ್ಲಿದ್ದ 22 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.